ಲಾಕ್ ಡೌನ್ ಹಿನ್ನೆಲೆ: ರೈತರಿಗೆ ಅನುಕೂಲ ಕಲ್ಪಿಸಲು ಮತ್ತೆ  ‘ಅಗ್ರಿವಾರ್ ರೂಮ್’ ಆರಂಭ…

ಬೆಂಗಳೂರು,ಏಪ್ರಿಲ್,28,2021(www.justkannada.in): ರಾಜ್ಯ ಸರ್ಕಾರ ರಾಜ್ಯದಲ್ಲಿ ಘೋಷಿಸಿರುವ ಈ ಹದಿನಾಲ್ಕು ದಿನಗಳ  ಲಾಕ್ಡೌನ್‌ ‌ನಲ್ಲಿ ರೈತರಿಗಾಗಲಿ ಕೃಷಿ ಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆಯಾಗದಿರಲೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಮ್ ಆರಂಭಿಸಿದೆ.jk

ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಅಗ್ರಿವಾರ್ ರೂಮ್ ಆರಂಭಿಸಿರುವಂತೆಯೇ ಈ ಬಾರಿಯೂ ರೈತರಿಗೆ  ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆನ್ನೆಲುಬಾಗಿ ನಿಂತಿದ್ದು ಕೃಷಿ ಇಲಾಖೆಯಲ್ಲಿ “ಅಗ್ರಿ ವಾರ್ ರೂಮ್” ಆರಂಭಿಸಿದ್ದಾರೆ. ಈಗಾಗಲೇ ಮುಂಗಾರು ಆರಂಭವಾಗುತ್ತಿರುವುದರಿಂದ ಲಾಕ್ಡೌನ್‌ ಅವಧಿಯಲ್ಲಿ ಯಾವುದೇ ಇಲಾಖೆಯಾಗಲೀ ಅಧಿಕಾರಿಗಳಾಗಲೀ ಕೃಷಿ ಪರಿಕರ ಸಾಗಾಣಿಕೆ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಕೃಷಿ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಅಂದ್ಹಾಗೆ ರೈತರಿಗೆ ನೆರವಾಗಲು ಮತ್ತೆ ಅಗ್ರಿ ವಾರ್ ರೂಮ್ ನೆರವು ಕಲ್ಪಿಸಲಿದೆ‌. ಕೃಷಿ ಕೇಂದ್ರ ಕಚೇರಿಯಲ್ಲಿ ಅಗ್ರಿ ವಾರ್ ರೂಮ್ ಮತ್ತೆ ತೆರೆದಿದ್ದು080-22210237 ಹಾಗೂ  080-22212818 ಈ ಸಂಖ್ಯೆಗಳು ಸಹಾಯವಾಣಿಯಾಗಿ ಕಾರ್ಯನಿರ್ವಹಿಸಲಿವೆ‌.ಈ ಸಹಾಯವಾಣಿ ಅಗ್ರಿ ವಾರ್ ರೂಮ್ ಇಂದಿನಿಂದ ಅಂದರೆ ಏ.28ರಿಂದ ಆರಂಭವಾಗಿದ್ದು ಬೆಳಿಗ್ಗೆ 8 ರಿಂದ ರಾತ್ರಿ  8 ರವರೆಗೆ ಕಾರ್ಯನಿರ್ವಹಿಸಲಿದೆ.ಇದಕ್ಕಾಗಿ ಕೃಷಿ ಪ್ರಧಾನ ಕಚೇರಿಯಲ್ಲಿ ಇಬ್ಬರು ತಾಂತ್ರಿಕ ಅಧಿಕಾರಿಗಳು ಹಾಗೂ ಒಬ್ಬ ಉಪಕೃಷಿ ನಿರ್ದೇಶಕರು ಉಸ್ತುವಾರಿಗೆ ನೇಮಿಸಲಾಗಿದೆ.

ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಅಗ್ರಿವಾರ್ ರೂಮ್ ಯಶಸ್ವಿಯೂ ಆಗಿತ್ತು. ಅಲ್ಲದೇ ರೈತರಿಗೆ ನೆರವಾಗಿ 2020ನೇ ಸಾಲಿನಲ್ಲಿ ಕೋವಿಡ್ ನಿರ್ಬಂಧಿತ ಅವಧಿಯಲ್ಲಿಯೂ ಶೇ.106ಕ್ಕೂ ಹೆಚ್ಚಿನ ದಾಖಲೆಯ ಬಿತ್ತನೆಯಾಗಲು ನೆರವಾಗಿತ್ತು.ಅದೇ ಮಾದರಿಯಲ್ಲಿ ಈಗಲೂ ಈ ಸಹಾಯವಾಣಿ ಅಗ್ರಿವಾರ್ ರೂಮ್ ಕಾರ್ಯನಿರ್ವಹಿಸಲಿದೆ.

ಕಳೆದ ಬಾರಿಯಂತೆ ಈ ಹದಿನಾಲ್ಕು ದಿನಗಳ ಅವಧಿಯಲ್ಲಿ ಕೃಷಿ ಸಮಸ್ಯೆಗಳ ಬಗ್ಗೆ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ಈ ಅಗ್ರಿವಾರ್ ರೂಮ್  ಕಾರ್ಯನಿರ್ವಹಿಸಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ರೈತರು ತಾವು ಬೆಳೆದ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕುರಿತು ಮಾಹಿತಿ ನೀಡಲಿದ್ದು ರೈತರು ಈ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಒಂದುವೇಳೆ ದೂರವಾಣಿ ಮೂಲಕ ಮಾಹಿತಿ  ಲಭ್ಯವಾಗದೇ ಇದ್ದಲ್ಲಿ ಅವುಗಳನ್ನು ಪಟ್ಟಿ ಮಾಡಿ ಆನಂತರ ಬಗೆಹರಿಸುವ ಪ್ರಯತ್ನವನ್ನೂ ಸಹ ಕೃಷಿ ಇಲಾಖೆ ಮಾಡಲಿದೆ.Lockdown -AgriWar Room - start -again –facilitate- farmers

ಮುಂದಿನ ದಿ‌ನಗಳಲ್ಲಿ ತೋಟಗಾರಿಕೆ, ರೇಷ್ಮೆ,ಕೃಷಿ ಇಲಾಖೆಗಳನ್ನು ಸೇರಿಸಿ ಒಂದು ತಂಡವನ್ನಾಗಿ ಮಾಡಿ ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನೂ ಸಹ ನೀಡುವ ಚಿಂತನೆಯಿದೆ.

Key words: Lockdown -AgriWar Room – start -again –facilitate- farmers