ವಿದ್ಯುತ್‌ ಸ್ಪರ್ಶಿಸಿ ಮಾರ್ಗದಾಳು ಸಾವು ಪ್ರಕರಣ: ತನಿಖೆ ವರದಿ ನಂತರ ಸೂಕ್ತ ಕ್ರಮ- ಇಂಧನ ಸಚಿವ ಕೆ.ಜೆ.ಜಾರ್ಜ್‌.

ಬೆಂಗಳೂರು,ಜು.6,2023(www.justkannada.in): ಅಫಜಲಪುರ ತಾಲೂಕಿನ ಚೌಡಾಪುರ ಉಪವಿಭಾಗದಲ್ಲಿ ವಿದ್ಯುತ್‌ ಸ್ಪರ್ಶದಿಂದ ಮಾರ್ಗದಾಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಖಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದ್ದು,ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಹೇಳಿದರು.

ಅಫಜಲಪುರ ಶಾಸಕ ಎಂ.ವೈ.ಪಾಟೀಲ್‌ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ ಜಾರ್ಜ್ ಉತ್ತರ ನೀಡಿದರು. ಇದು ಅತ್ಯಂತ ದುರಂತ ಘಟನೆ. ಈಗಾಗಲೇ ಶಾಖಾಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಅನುಸಾರ ಕ್ರಮಕೈಗೊಳ್ಳಲಾಗುವುದು. ಮೃತ ಮಾರ್ಗದಾಳು ಕುಟುಂಬಕ್ಕೆ 5ಲಕ್ಷ ರೂ.ಗಳ ಪರಿಹಾರ, ಅನುಕಂಪ ನೌಕರಿ, ವಿಮಾ ಸೇರಿ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಚೌಡಾಪುರ ಉಪವಿಭಾಗದಲ್ಲಿ ಮಾರ್ಗದಾಳು ಶಾಖಾಧಿಕಾರಿಗಳ ಅನುಮತಿ ಪಡೆದುಕೊಂಡೇ ವಿದ್ಯುತ್‌ ಪರಿವರ್ತಕದ ದುರಸ್ತಿಗೆ ತೆರಳಿದ್ದರು.  ಕಂಬ ಏರಿದಾಗ ವಿದ್ಯುತ್‌ ಸ್ಪರ್ಶಿಸಿ ಮಾರ್ಗದಾಳು ಸಾವನ್ನಪ್ಪಿದ್ದಾರೆ ಹೊರತು ಕಂಬದಿಂದ ಆಯಾತಪ್ಪಿ ಕೆಳಬಿದ್ದಿಲ್ಲ.ಇದು ಸಂಪೂರ್ಣ ಹೊಣೆ ಇಂಧನ ಇಲಾಖೆಯದ್ದಾಗಿದ್ದು, ಸದರಿ ಮೃತ ಮಾರ್ಗದಾಳು ಕುಟುಂಬಕ್ಕೆ 5ಲಕ್ಷ ಪರಿಹಾರದ ಬದಲಿಗೆ 50ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್‌ ಅವರು ಒತ್ತಾಯಿಸಿದ್ದರು.

Key words: linemen-death -case – action –after- investigation- Minister -KJ George