ರೋಷನ್ ಬೇಗ್ ಜತೆ ಸಂತೋಷ್ ಪ್ರಯಾಣಿಸುತ್ತಿದ್ದರು ಎಂಬುದು ಸುಳ್ಳು- ಸಿಎಂ ಹೆಚ್.ಡಿಕೆ ವಿರುದ್ದ ಬಿಜೆಪಿ ಕಿಡಿ

ಬೆಂಗಳೂರು,ಜು,16,2019(www.justkannada.in): ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಎಸ್‌ ಐಟಿ ವಶಕ್ಕೆ ಪಡೆದ ಹಿನ್ನಲೆ ಸಿಎಂ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ರಾಜ್ಯ ಬಿಜೆಪಿ ಕಿಡಿಕಾರಿದೆ.  ಇದೀಗ ಬಿಜೆಪಿ ನಾಯಕರು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.

ಮಾಜಿ ಸಚಿವ ರೋಷನ್ ಬೇಗ್ ಜತೆ “ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರೋಷನ್ ಬೇಗ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಬಿಜೆಪಿಯ ಕುದುರೆ ವ್ಯಾಪಾರ ಬಿಂಬಿಸುತ್ತದೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ ಗೆ  ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ,  ರೋಶನ್ ಬೇಗ್ ಅವರೊಂದಿಗೆ ಸಂತೋಷ್ ಪ್ರಯಾಣಿಸುತ್ತಿದ್ದರು ಎಂಬುದು ಸುಳ್ಳು ಸುದ್ದಿ. ಸುಳ್ಳು ಸುದ್ದಿ ಸೃಷ್ಟಿಸಿ ಸಿಎಂ ರಾಜ್ಯವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಜುಲೈ 19 ರಂದು ಎಸ್‌ ಐಟಿ ವಿಚಾರಣೆಗೆ ಹಾಜರಾಗಲು ರೋಷನ್ ಬೇಗ್ ಅವರಿಗೆ ಸಮಯ ನೀಡಲಾಗಿದೆ. ಆದರೆ ಈ ವಿಚಾರದಲ್ಲಿ ಸರ್ಕಾರ ತನ್ನ ಸ್ವಂತ ಶಾಸಕರಿಗೆ ಬ್ಲಾಕ್ ಮೇಲ್ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ಎಂದು ಕಿಡಿಕಾರಿದೆ.

ಹಾಗೆಯೇ ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ರವಿಕುಮಾರ್, ಸಿಎಂ ಆಧಾರ ರಹಿತ ಆರೋಪ ಮಾಡಿದ್ದಾರೆ. ರೋಷನ್ ಬೇಗ್ ಅವರ ಜತೆ ಸಂತೋಷ್ ಇರಲಿಲ್ಲ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ  ಎಸ್ ಐಟಿ ದುರ್ಬಳಕೆಯಾಗುತ್ತಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಶಾಸಕರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

Key words:  lie – Santosh -traveling -Roshan Beg-BJP  – CM HDK