ಮೈಸೂರು ಕೊರೋನಾ ಮುಕ್ತವಾದಂತೆ ರಾಜ್ಯವೂ ಮುಕ್ತವಾಗಲಿ: ಸಚಿವ ಸೋಮಶೇಖರ್

* ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದ ಸಚಿವರು

* ಶೀಘ್ರ ಮಹಾಮಾರಿಯಿಂದ ರಾಜ್ಯದ ಜನತೆಯ ಪಾರುಮಾಡುವಂತೆ ಪ್ರಾರ್ಥಿಸಿದ ಸಚಿವರು

ನಂಜನಗೂಡು, ಮೇ 17, 2020 (www.justkannada.in): ಮೈಸೂರು ಜಿಲ್ಲೆ ಕೊರೋನಾ ಮುಕ್ತವಾಗಿದೆ. ಬಹುಬೇಗ ರಾಜ್ಯದ ಜನತೆಯನ್ನೂ ಈ ಮಹಾಮಾರಿಯಿಂದ ಪಾರು ಮಾಡು ಎಂದು ಸ್ವಾಮಿ ನಂಜುಂಡೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ಸಚಿವರು, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಈ ವೇಳೆ ನಂಜನಗೂಡು ಕ್ಷೇತ್ರದ ಶಾಸಕರಾದ ಹರ್ಷವರ್ಧನ್ ಇದ್ದರು. ಬಳಿಕ ಮಾತನಾಡಿದ ಸಚಿವರು, ತಾಯಿ ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರನ ದಯೆಯಿಂದ ಇಂದು ಮೈಸೂರು ಜಿಲ್ಲೆ ಕೊರೋನಾ ಮುಕ್ತವಾಗಿದೆ. ಹೀಗೆಯೇ ರಾಜ್ಯದ ಜನರನ್ನೂ ಪಾರು ಮಾಡುವಂತೆ ಆ ನಂಜುಂಡೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಜಿಲ್ಲೆ ಕೊರೋನಾ ಮುಕ್ತವಾಗಿರುವುದರ ಹಿಂದೆ ಜಿಲ್ಲಾಡಳಿತದ ಶ್ರಮ ಮುಖ್ಯವಾಗಿದೆ. ಪೊಲಿಸ್ ಇಲಾಖೆ, ವೈದ್ಯರು, ನರ್ಸ್ ಗಳು, ಪೌರ ಕಾರ್ಮಿಕರ ಸೇವೆ ಅನನ್ಯ. ಇವರೆಲ್ಲರ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಎಲ್ಲ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.