ಉದ್ಯಾನನಗರಿಯಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ ಅತೀ ದೊಡ್ಡ ಉದ್ಯಾನವನ.

ಬೆಂಗಳೂರು, ಅಕ್ಟೋಬರ್ 6, 2021 (www.justkannada.in): ಬೆಂಗಳೂರಿಗರಿಗೆ ಶೀಘ್ರದಲ್ಲೇ ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್ ಗಳಿಗಿಂತ ದೊಡ್ಡ ಉದ್ಯಾನವನ ದೊರೆಯಲಿದೆ. ಈ ಪ್ರಸ್ತಾಪಿತ ಉದ್ಯಾನವನ ಯಲಹಂಕದ ಜರಕಬಂಡೆ (ಜೆಬಿ) ಕಾವಲ್ ಬಳಿ ೬೪೮ ಎಕರೆ ಪ್ರದೇಶವ್ಯಾಪ್ತಿಯಲ್ಲಿ ತಲೆ ಎತ್ತಲಿದೆ.

ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ತೋಟಗಾರಿಕಾ ಸಚಿವರಾದ ಎನ್. ಮುನಿರತ್ನ ಅವರು ಮಂಗಳವಾರದಂದು ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಉದ್ಯಾನವನ ನಿರ್ಮಾಣಕ್ಕೆ ಇಲಾಖೆಯ ಅನುಮತಿಯನ್ನು ಪಡೆದಿದ್ದಾರೆ. ಮುನಿರತ್ನ ಅವರು ಈಗಾಗಲೇ ಈ ಭೂಪ್ರದೇಶದ ಸಮೀಕ್ಷೆಯನ್ನು ನಡೆಸಿದ್ದಾರೆ. ಈ ಪ್ರಸ್ತಾಪಿತ ಉದ್ಯಾನವನದಲ್ಲಿ ಪ್ರಸ್ತುತ ೩೨,೦೦೦ ನೀಲಗಿರಿ ಮರಗಳಿವೆ. ಸರ್ಕಾರದ ನಿರ್ಧಾರದ ಪ್ರಕಾರ ನೀಲಗಿರಿ ಮರಗಳು ಅತೀ ಹೆಚ್ಚಿನ ಪ್ರಮಾಣದ ನೀರನ್ನು ಸೆಳೆಯುವ ಕಾರಣದಿಂದಾಗಿ ಈ ಮರಗಳನ್ನು ತೆರವುಗೊಳಿಸಲಾಗುವುದಂತೆ.

ಈ ಪ್ರಸ್ತಾಪಿತ ಉದ್ಯಾನವನ್ನು ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಈ ಉದ್ಯಾನವನ ಬೆಂಗಳೂರು ಮಹಾನಗರದ ಹಸಿರು ವ್ಯಾಪ್ತಿಯನ್ನು ಮಹತ್ತರವಾದ ಮಟ್ಟಿಗೆ ವೃದ್ಧಿಸಲಿದ್ದು, ನಗರದಲ್ಲಿ ಹೆಚ್ಚಾಗುತ್ತಿರುವ ವಾಹನಗಳಿಂದಾಗಿ ಉದ್ಭವಿಸಿರುವ ವಾಯು ಮಾಲಿನ್ಯವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಲಿದೆ.

ಮೇಲಾಗಿ ಈ ಪ್ರಸ್ತಾಪಿತ ಉದ್ಯಾನವನ ಮತ್ತೊಂದು ಅನುಕೂಲವನ್ನು ಹೊಂದಿದೆ. ಅದೇನೆಂದರೆ ಜೆಬಿ ಕಾವಲ್‌ನಲ್ಲಿ ಈಗಾಗಲೇ ೩೨ ಹೆಕ್ಟೇರ್ ಪ್ರದೇಶದಷ್ಟು ಮೀಸಲು ಅರಣ್ಯವಿದೆ. ಅಲ್ಲಿ ೨೦೧೫ರಲ್ಲಿ ‘ಟ್ರೀ ಪಾರ್ಕ್’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಒದಗಿಸುತ್ತಿರುವ ಏಕೈಕ ಮೀಸಲು ಅರಣ್ಯ. ಇಲ್ಲಿರುವ ವಿವಿಧ ತಳಿಗಳ ಮರಗಳು ಈಗಾಗಲೇ ಪರಿಸರಪ್ರಿಯರು ಹಾಗೂ ಸಸ್ಯಶಾಸ್ತ್ರಜ್ಞರಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಮರಗಳಲ್ಲದೆ ಈ ಸ್ಥಳದಲ್ಲಿ ಅನೇಕ ಔಷಧೀಯ ಗುಣಗಳುಳ್ಳ ಸಸಿಗಳಿವೆ. ಹಾಗಾಗಿ, ಇದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಒಂದು ಅತ್ಯಂತ ಕುತೂಹಲಕರ, ಮನರಂಜನೆ, ಕಲಿಕೆ, ಪರಿಸರ-ಪ್ರವಾಸೋದ್ಯಮಗಳನ್ನು ಒದಗಿಸುವ ಪ್ರಮುಖ ಕೇಂದ್ರ ಸ್ಥಾನವಾಗಲಿದೆ.

“ಬೆಂಗಳೂರು ನಗರ ಅತಿಯಾದ ಜನಸಂಖ್ಯೆ, ಸರಿಯಾಗಿ ಯೋಜಿಸದೇ ಇರುವಂತಹ ಮೂಲಭೂಸೌಕರ್ಯ ಯೋಜನೆಗಳು ಹಾಗೂ ಗಂಭೀರ ಸ್ವರೂಪದ ಪರಿಸರ ಮಾಲಿನ್ಯದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಉದ್ಯಾನವನ ಈ ಎಲ್ಲಾ ಸಮಸ್ಯೆಗಳಿಗೂ ಏಕೈಕ ಪರಿಹಾರವಾಗುವುದಿಲ್ಲ. ಇದರಿಂದ ಉಳಿದ ಬಹಳ ಅಲ್ಪ ಪ್ರಮಾಣದಲ್ಲಿರುವ, ಪ್ರಸ್ತುತ ನಮಗೆ ದೈನಂದಿನ ಅಗತ್ಯ ಆಮ್ಲಜನಕವನ್ನು ಒದಗಿಸುತ್ತಿರುವ ಅರಣ್ಯ ವ್ಯಾಪ್ತಿ ಖಂಡಿತವಾಗಿ ನಾಶಗೊಳ್ಳುತ್ತದೆ. ಈ ಹೊಸ ಉದ್ಯಾನವನ, ಮಾನವ ಮಧ್ಯಸ್ಥಿಕೆಯಿಂದಾಗಿ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ,” ಎನ್ನುವುದು ಪರಿಸರ ತಜ್ಞ ನಟರಾಜ್ ಡಿ.ಆರ್. ಅವರ ಅಭಿಪ್ರಾಯವಾಗಿದೆ.

ಯಲಹಂಕದಲ್ಲಿ ವಾಸಿಸುತ್ತಿರುವ ಒಂದು ಖಾಸಗಿ ಸಂಸ್ಥೆಯ ಸಹಾಯಕ ನಿರ್ವಾಹಕರಾದ ಮಂಜುನಾಥ್ ಎಂ.ಎನ್. ಅವರು ಈ ಪ್ರಸ್ತಾಪಿತ ಉದ್ಯಾನವನ್ನು ಸ್ವಾಗತಿಸಿದರು. ಅವರ ಪ್ರಕಾರ, “ಈ ಪ್ರಸ್ತಾಪಿತ ಉದ್ಯಾನವನ ಈ ಕಾಂಕ್ರೀಟ್ ಕಾಡಿನಲ್ಲಿ ವಾಸಿಸುತ್ತಿರುವ ನಮ್ಮೆಲ್ಲರ ಯಾಂತ್ರಿಕ ಜೀವನದಲ್ಲಿ ಖಂಡಿತವಾಗಿಯೂ ಸ್ವಲ್ಪ ನಿರಾಳತೆಯನ್ನು ತರುತ್ತದೆ. ಇದು ಪರಿಸರ ಹೆಚ್ಚು ಹಸಿರಾಗಲು ಹಾಗೂ ಸ್ವಚ್ಛಗೊಳ್ಳಲು ಕೊಡುಗೆ ನೀಡುತ್ತದೆ. ಯಲಹಂಕದ ನಿವಾಸಿಯಾಗಿ ನಾನು ಈ ಯೋಜನೆಯನ್ನು ಬೆಂಬಲಿಸುತ್ತೇನೆ” ಎಂದರು.

ಮೂಲ: ಬೆಂಗಳೂರ್ ಮಿರರ್

Key words:  largest park – heading – Bangalore