ಜಮೀನು ಒತ್ತುವರಿ: ಮಾಲೀಕರಿಗೆ 1.60 ಕೋಟಿ ರೂ. ಪರಿಹಾರ ಚೆಕ್ ವಿತರಣೆ

ಮೈಸೂರು,ಆಗಸ್ಟ್,2,2025 (www.justkannada.in): ನಗರಸಭೆಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವ ವೇಳೆ ಜಮೀನು ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಜಮೀನು  ಮಾಲೀಕರಿಗೆ  1,60,82,242 ರೂ.ಗಳ ಪರಿಹಾರ ಚೆಕ್ ಅನ್ನು ಮೈಸೂರು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ವಿತರಿಸಲಾಯಿತು.

ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ, ಲೋಕಾಯುಕ್ತ ಕಛೇರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಮೀನು ಮಾಲೀಕರಾದ ಕೆ. ಪುಟ್ಟಮಾದಯ್ಯ ಅವರಿಗೆ ಪರಿಹಾರವಾಗಿ 1,60,82,242 ರೂ.ಗಳ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

 ಏನಿದು ಪ್ರಕರಣ

ಕೆ. ಪುಟ್ಟಮಾದಯ್ಯ ಬಿನ್ ಲೇಟ್ ಮಾದಯ್ಯ ಅವರು ಅವರ ಅಕ್ಕತಂಗಿಯರ ಹೆಸರಿನಲ್ಲಿ ಸರ್ವೇ ನಂ:222 ರಲ್ಲಿ 3.35 ಎಕರೆ ಜಮೀನು ನಗರಸಭೆಯವರು ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವಾಗ ಕೈತಪ್ಪಿನಿಂದ ಸರ್ವೇ ಕಾರ್ಯದಲ್ಲಿ ಒತ್ತುವರಿಯಾಗಿತ್ತು.  ಇದನ್ನು ಪ್ರಶ್ನಿಸಿ ಪುಟ್ಟಮಾದಯ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಲೋಕಾಯುಕ್ತರು ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲಾಧಿಕಾರಿಗಳವರ ಆದೇಶದಂತೆ ನಂಜನಗೂಡು ನಗರಸಭೆಯ ಚುನಾಯಿತ ಆಡಳಿತ ಮಂಡಳಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಿ ನಂತರ ಜಿಲ್ಲಾಧಿಕಾರಿ ಜಿಲ್ಲಾ ಸಮಿತಿಯಲ್ಲಿ ಈ ಜಮೀನಿಗೆ ದರ ನಿಗದಿಪಡಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ದಿನಾಂಕ: 31.07.2025ರಂದು ನೀಡಿದ್ದರು. ಇದೀಗ ನಂಜನಗೂಡು ನಗರಸಭಾ ವತಿಯಿಂದ ಇದರ ಖರೀದಿ ಬಾಬು ಒಟ್ಟು ಮೌಲ್ಯ ರೂ.1,60,82,242/- ಗಳ ಚೆಕ್ ಅನ್ನು ಇಂದು ಕೆ. ಪುಟ್ಟಮಾದಯ್ಯ ಅವರಿಗೆ ವಿತರಿಸಲಾಗಿದೆ.vtu

Key words: Land encroachment, Rs. 1.60 crore, compensation cheque, distributed, Mysore