ಎರಡು ವರ್ಷಗಳ ನಂತರ ಹಿಂದಿರುಗಿದ ಲಾಲ್‌ ಬಾಗ್ ಪುಷ್ಪ ಪ್ರದರ್ಶನ.

 

ಬೆಂಗಳೂರು, ಜುಲೈ 30, 2022 (www.justkannada.in): ಎರಡು ವರ್ಷಗಳ ನಂತರ ಬೆಂಗಳೂರಿನ ಜನಪ್ರಿಯ ಲಾಲ್‌ ಬಾಗ್ ಪುಷ್ಪ ಪ್ರದರ್ಶನ ಈ ಸ್ವಾತಂತ್ರ್ಯ ದಿನಾಚರಣೆಯಂದು ಸಂಪೂರ್ಣ ವೈಭವದೊಂದಿಗೆ ಮರಳಲಿದೆ. ಆಗಸ್ಟ್ 5ರಂದು ಪುಷ್ಪ ಪ್ರದರ್ಶನ ಉದ್ಘಾಟನೆಯಾಗಲಿದೆ.

ಈ ಕುರಿತು ಮಾತನಾಡಿದ ತೋಟಗಾರಿಕಾ (ಲಾಲ್‌ಬಾಗ್) ಇಲಾಖೆಯ ಉಪ ನಿರ್ದೇಶಕಿ ಕುಸುಮಾ ಅವರು, “ಕನಿಷ್ಠ ೩೫,೦೦೦ ಹೂವಿನ ಕುಂಡಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ. ಈ ಬಾರಿಯ ಪುಷ್ಪ ಪ್ರದರ್ಶನ ಡಾ.ರಾಜ್‌ಕುಮಾರ್ ಹಾಗೂ ಕಳೆದ ವರ್ಷ ನಮ್ಮನ್ನೆಲ್ಲಾ ಅಗಲಿದ ನಮ್ಮ ಮೆಚ್ಚಿನ ಪುನೀತ್ ರಾಜ್‌ ಕುಮಾರ್ ಅವರ ಸ್ಮರಣಾರ್ಥವಾಗಿ ಅವರ ವಿಷಯಾಧಾರಿತವಾಗಿರಲಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 5ರಂದು ಉದ್ಘಾಟನಾ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜ್‌ ಕುಮಾರ್, ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ ಕುಮಾರ್ ಹಾಗೂ ಅವರ ಕುಟುಂಬಗಳ ಸದಸ್ಯರುಗಳನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ,” ಎಂದು ವಿವರಿಸಿದರು.

ಈ ಇಬ್ಬರು ಮೇರು ನಟರ ಚಲನಚಿತ್ರಗಳ ಆಯ್ದ ತುಣುಕುಗಳ ಪ್ರದರ್ಶನದ ಜೊತೆಗೆ, ಡಾ. ರಾಜ್‌ ಕುಮಾರ್ ಸ್ವಂತ ಊರು ಗಾಜನೂರಿನಲ್ಲಿರುವ ಅವರ ವಂಶಸ್ಥೃ ಮನೆ ಹಾಗೂ ರಾಜ್‌ ಕುಮಾರ್ ಕುಟುಂಬದವರು ಮೈಸೂರಿನಲ್ಲಿ ಸ್ಥಾಪಿಸಿರುವ ಮಹಿಳಾ ಪುನರ್ವಸತಿ ಹಾಗೂ ಅಭಿವೃದ್ಧಿ ಕೇಂದ್ರ ‘ಶಕ್ತಿ ಧಾಮ’ದ ಪುಷ್ಪ ಮಾದರಿಗಳನ್ನು ಸೃಷ್ಟಿಸಲು ಯೋಜಿಸಲಾಗಿದೆ.

ಈ ಬಾರಿ ಇಲಾಖೆಯು ಹೂವುಗಳನ್ನು ಆಮದು ಮಾಡಿಕೊಳ್ಳುತ್ತಿದೆ. “ವಿವಿಧ ರಾಷ್ಟ್ರಗಳಿಂದ ಹೂವುಗಳು ಆಗಮಿಸಲಿವೆ. ಭಾರತದ ಸ್ಥಳಗಳಿಂದ ಅಂದರೆ, ಊಟಿ ಹಾಗೂ ಹೈದ್ರಾಬಾದ್‌ ಗಳಿಂದಲೂ ಪುಷ್ಪಗಳು ಆಗಮಿಸಲಿವೆ. ಡಾ. ರಾಜ್ ಹಾಗೂ ಪುನೀತ್ ರಾಜ್‌ ಕುಮಾರ್ ಅವರ ಜೀವನದ ಪಯಣ ಹಾಗೂ ಸಾಧನೆಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ,” ಎಂದು ಕುಸುಮಾ ವಿವರಿಸಿದರು.

ಕೋವಿಡ್-೧೯ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಈ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿರಲಿಲ್ಲ. ಇದು ೨೧೨ನೇ ಪುಷ್ಪ ಪ್ರದರ್ಶನವಾಗಿದ್ದು, ಈ ಬಾರಿ ಮುಂಚಿನ ವೈಭವವನ್ನು ಮರು ಸೃಷ್ಟಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆಗಸ್ಟ್ ೫ ರಿಂದ ಆಗಸ್ಟ್ ೧೫ರವರೆಗೂ ಈ ಪುಷ್ಪ ಪ್ರದರ್ಶನ ಸಾರ್ವಜನಿಕರಿಗಾಗಿ ನಡೆಯಲಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Lal Bagh-Flower Show –returns- after -two years.