ಅರಣ್ಯ ಇಲಾಖೆ ಹಸಿರೀಕರಣಕ್ಕೆ ಅನುದಾನ ಕೊರತೆ

ಬೆಂಗಳೂರು:ಜುಲೈ-28: ಒಂದು ಕಡೆ ಅಭಿವೃದ್ಧಿ ಚಟುವಟಿಕೆಗಳಿಂದ ಅರಣ್ಯ ಪ್ರದೇಶ ಕುಗ್ಗುತ್ತಿದ್ದರೆ, ಇನ್ನೊಂದೆಡೆ ಅರಣ್ಯ ಇಲಾಖೆಯ ಅಭಿವೃದ್ಧಿ ಯೋಜನೆಗೆ ಅನುದಾನದ ಕೊರತೆ ಉಂಟಾಗಿದೆ.

ಅರಣ್ಯ ಇಲಾಖೆಯಲ್ಲಿ ಅನುದಾನದ ಕೊರತೆ ಯಿಂದ ಸಸಿ ನೆಡುವ ಯೋಜನೆ ಪ್ರಸಕ್ತ ಸಾಲಿನಲ್ಲಿ 10 ಸಾವಿರ ಹೆಕ್ಟೇರ್‌ನಷ್ಟು ಕಡಿಮೆಯಾಗಲಿದೆ.

ಪ್ರತಿ ವರ್ಷ ‘ಕರ್ನಾಟಕ ಅರಣ್ಯ ಅಭಿವೃದ್ಧಿ ಅನುದಾನ’ದಲ್ಲಿ ಕನಿಷ್ಠ 50 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುತ್ತಿತ್ತು. ಆದರೆ, ಮೈತ್ರಿ ಸರ್ಕಾರವು ಆನೆ ದಾಳಿ ನಿಯಂತ್ರಣಕ್ಕೆ ‘ರೈಲು ಹಳಿ ತಡೆಗೋಡೆ ನಿರ್ಮಾಣ’ ಎಂಬ ಹೊಸ ಯೋಜನೆ ರೂಪಿಸಿತು. ಆದರೆ, ಅದಕ್ಕೆ ಪ್ರತ್ಯೇಕ ಅನುದಾನ ನೀಡಲಿಲ್ಲ. ಹೀಗಾಗಿ, ಈ ಯೋಜನೆಗೆ ಹಸಿರೀಕರಣಕ್ಕಾಗಿ ಮೀಸಲಿಟ್ಟ ಹಣವನ್ನು ಬಳಕೆ ಮಾಡುವಂತಾಯಿತು. ಇದರಿಂದ ಸಸಿ ನೆಡುವ ಕಾರ್ಯಕ್ಕೆ ಹಿನ್ನಡೆಯಾಗಿದ್ದು, 50 ಸಾವಿರ ಹೆಕ್ಟೇರ್‌ ಬದಲಿಗೆ ಕೇವಲ 35 ಸಾವಿರ ಹೆಕ್ಟೇರ್‌ಗೆ ಸೀಮಿತಗೊಳ್ಳಲಿದೆ.

ರಾಜ್ಯದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆನೆ ದಾಳಿ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಮೈತ್ರಿ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 621 ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿಧಾಮಗಳ ಸುತ್ತ ‘ರೈಲು ಹಳಿ ತಡೆಗೋಡೆ ನಿರ್ಮಾಣ’ ಹೊಸ ಯೋಜನೆಗೆ ಚಾಲನೆ ಕೊಟ್ಟಿತ್ತು.

ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ.ಅದಕ್ಕಾಗಿ ನಿಗದಿಪಡಿಸಿತಾದರೂ ಅದಕ್ಕಾಗಿ ಹೊಸದಾಗಿ ಅನುದಾನ ನೀಡದೇ ‘ಕರ್ನಾಟಕ ಅರಣ್ಯ ಅಭಿವೃದ್ಧಿ ಅನುದಾನ’ದಲ್ಲಿಯೇ ಬಳಕೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ, ಕರ್ನಾಟಕ ಅರಣ್ಯ ಅಭಿವೃದ್ಧಿ ಅನುದಾನ 300 ಕೋಟಿ ರೂ.ನಲ್ಲಿ ಸರ್ಕಾರದ ಸೂಚನೆಯಂತೆ 100 ಕೋಟಿ.ರೂ.ರೈಲು ಹಳಿ ತಡೆ ಗೋಡೆ ನಿರ್ಮಾಣ ಯೋಜನೆಗೆ ಅರಣ್ಯ ಇಲಾಖೆ ಬಳಸುತ್ತಿದೆ. ಉಳಿದ 200 ಕೋಟಿ ಅನುದಾನದಲ್ಲಿ ಹಸಿರೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಇವುಗಳ ಜತೆಗೆ ಅರಣ್ಯ ಇಲಾಖೆಗೆ ಪ್ರತಿ ವರ್ಷ ಗ್ರಾಮೀಣಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಸಿರೀಕರಣಕ್ಕಾಗಿ ಲಭ್ಯವಾಗುತ್ತಿದ್ದ ಅನುದಾನವು ಕಳೆದ ಒಂದು ವರ್ಷದಿಂದ ಲಭ್ಯವಾಗಿಲ್ಲದಿರುವುದು ಹಸಿರೀಕರಣ ಹಿನ್ನಡೆಗೆ ಕಾರಣವಾಗಿದೆ.

ಹಿನ್ನಡೆ: ಅಭಿವೃದ್ಧಿ ಕಾರ್ಯಗಳಿಂದ ಅವನತಿ ಹೊಂದುತ್ತಿರುವ ಅರಣ್ಯ ಪ್ರದೇಶಕ್ಕೆ ಪರ್ಯಾ ಯವಾಗಿ ಅರಣ್ಯ ಇಲಾಖೆ ‘ಕರ್ನಾಟಕ ಅಭಿವೃದ್ಧಿ ಅನುದಾನದಡಿ’ ಬೀಜ ಬಿತ್ತನೆ, ಸಸಿ ನೆಡುವ ಕಾರ್ಯ ಕೈಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ನೀಡುವ ಅನುದಾನವನ್ನು ಸರ್ಕಾರ ಕಡಿಮೆಗೊಳಿಸಿದೆ. ಜತೆಗೆ ವರ್ಷದಿಂದ ವರ್ಷಕ್ಕೆ ನೇಮಕಾತಿ, ನೌಕರರ ಸಂಬಳ ಹೆಚ್ಚಳ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿದ್ದು, ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರ ಮೀಸಲಿಟ್ಟಿರುವ ಅನುದಾನ ಸಾಕಾಗುತ್ತಿಲ್ಲ. ಈ ಹಿಂದೆ ಪ್ರತಿ ವರ್ಷ 1 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬೀಜ ಬಿತ್ತನೆ ಹಾಗೂ ಸಸಿ ನಾಟಿ ಕಾರ್ಯ ಕೈಗೊಳ್ಳುತ್ತಿತ್ತು. ಅನುದಾನದ ಕೊರತೆಯಿಂದ ಅದರ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತಾ ಬರಲಾಗಿದೆ. ಕಳೆದ ವರ್ಷ ಮುಂಗಾರು ವೇಳೆ 44 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲಾಗಿತ್ತು. ಈ ಬಾರಿ 35 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಲಿದ್ದು, ಮುಂದಿನ ವರ್ಷ 20 ಸಾವಿರಕ್ಕೆ ಇಳಿಕೆಯಾಗಬಹುದು ಎಂದು ಅರಣ್ಯ ಇಲಾಖೆಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌ ತಿಳಿಸುತ್ತಾರೆ.
ಕೃಪೆ:ಉದಯವಾಣಿ

ಅರಣ್ಯ ಇಲಾಖೆ ಹಸಿರೀಕರಣಕ್ಕೆ ಅನುದಾನ ಕೊರತೆ
lack-of-grants-for-forest-department-naturalization