ಪಟಾಕಿ ಸ್ಪೋಟಗೊಂಡು ಓರ್ವ ಕಾರ್ಮಿಕ ಸಾವು: ಇಬ್ಬರಿಗೆ ಗಂಭೀರ ಗಾಯ.

ಮಂಡ್ಯ,ಮಾರ್ಚ್ 25,2024(www.justkannada.in): ರಾಜ್ಯದಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು , ಪಟಾಕಿ ಸ್ಫೋಟಗೊಂಡು ಓರ್ವ ಕಾರ್ಮಿಕ ಸಾವನ್ನಪ್ಪಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ರಮೇಶ್ (67) ಮೃತಪಟ್ಟ ಕಾರ್ಮಿಕ. ನಾಗಲಿಂಗ ಎಂಬುವವರು ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಆಗಮಿಸಿದ್ದರು. ನಿನ್ನೆ ರಾತ್ರಿ ಗ್ರಾಮದಲ್ಲಿ ಅದ್ದೂರಿಯಾಗಿ ಹಬ್ಬ ನೆರವೇರಿದೆ. ಬಳಿಕ ಗ್ರಾಮದ ಆಲೆಮನೆಯೊಂದರಲ್ಲಿ ನಾಲ್ವರು ತಂಗಿದ್ದರು. ಆದರೆ, ಇಂದು ಬೇರೊಂದು ಗ್ರಾಮಕ್ಕೆ ಹೋಗಲು ಪಟಾಕಿಗಳ ತುಂಬುವಾಗ ಸ್ಪೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಹೆಂಚುಗಳು ಹಾರಿಹೋಗಿದ್ದು, ಆಲೆಮನೆ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್, ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: laborer –death-firecracker-explosion-mandya