ಮೈಸೂರು,ಜನವರಿ,7,2026 (www.justkannada.in): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್.ನಾಗೇಂದ್ರ ನಡುವೆ ಫೈಟ್ ಉಂಟಾಗಿದೆ. 
ಇದೇ ವಿಚಾರವಾಗಿ ನಿನ್ನೆ ಮಾಜಿ ಸಂಸದ ಪ್ರತಾಪಸಿಂಹ ನೀಡಿರುವ ಹೇಳಿಕೆ ಕುರಿತು ಮಾತನಾಡಿರುವ ಎಲ್.ನಾಗೇಂದ್ರ, ಟಿಕೆಟ್ ಯಾರಿಗೆ ನೀಡಬೇಕು ಎಂದು ನಿರ್ಧರಿಸುವುದು ಹೈಕಮಾಂಡ್. ಪ್ರತಾಪಸಿಂಹಗೆ ಅದರ ಬಗ್ಗೆ ಅರಿವಿರಬೇಕಿತ್ತು. ಯಾವ ಕಾರಣಕ್ಕೆ ಆ ರೀತಿ ಹೇಳಿದರು ಗೊತ್ತಿಲ್ಲ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ. ನನ್ನ ಬಗ್ಗೆ ಯಾವ ಆಪಾದನೆಗಳಿಲ್ಲ. ನಾನು ಕೋರ್ಟ್ ನಿಂದ ಯಾವುದೇ ಸ್ಟೇ ತೆಗೆದುಕೊಂಡಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಪಾರ್ಲಿಮೆಂಟ್ ಟಿಕೆಟ್ ವೇಳೆ ಕೂಡ ಹೀಗೆಯೇ ಹೇಳಿದ್ದರು. ಪಾರ್ಲಿಮೆಂಟ್ ಟಿಕೆಟ್ ಯಾಕೆ ಅವರಿಗೆ ಸಿಗಲಿಲ್ಲ. ನನ್ನ ಕ್ಷೇತ್ರದ ಜೊತೆಗೆ ನಾಲ್ಕು ಕ್ಷೇತ್ರ ಗೆಲ್ಲಿಸಬೇಕಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಾನು ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಪಕ್ಷದ ಇತಿಮಿತಿ ಮೀರಿ ಯಾರೂ ವರ್ತಿಸಬಾರದು. ಸಾರ್ವಜನಿಕರಿಗೆ ಯಾರೂ ಗೊಂದಲ ಮೂಡಿಸಬೇಡಿ. ಟಿಕೆಟ್ ಯಾರಿಗೆ ಕೊಡಬೇಕು ಅಂತ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಎಲ್.ನಾಗೇಂದ್ರ ತಿಳಿಸಿದರು.
ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟ . 2028ಕ್ಕೂ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ
ಕಳೆದ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬರಲಿಲ್ಲ. ಕಳೆದ ಬಾರಿ ಯದುವೀರ್ ಅವರಿಗೆ 56,500 ಮತ ನೀಡಿದ್ದೇವೆ. ಅವರೊಬ್ಬ ಹಿಂದು ಹುಲಿ ಇದ್ದೀನಿ ಅಂತಾರೆ. ಅವರು ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಅವರು ಬೇರೆ ಎಲ್ಲಾದರೂ ಸ್ಪರ್ಧೆ ಮಾಡಲಿ. ಅವರು ಬೇರೆ ಊರಿನಿಂದ ಬಂದವರು. ನಾನು ಇದೇ ಊರಿನವನು, ಬೇರೆ ಕಡೆ ಹೋಗಲು ಆಗಲ್ಲ ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟ . 2028ಕ್ಕೂ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಮಂಡಲದ ಅಧ್ಯಕ್ಷರು ಯಾರು ಪರ ಇದ್ದಾರೆ ಒಮ್ಮೆ ಕೇಳಿ. ನನಗೆ ಅವರಿಗಿಂತ 100 ರಷ್ಟು ಕಾರ್ಯಕರ್ತರು ಜೊತೆಗಿದ್ದಾರೆ. ನಮ್ಮ ಸಂಬಂಧಿಕರು,ಸ್ನೇಹಿತರು ಎಲ್ಲರು ನನ್ನ ಜೊತೆ ಇದ್ದಾರೆ ಎಂದು ಪ್ರತಾಪ್ ಸಿಂಹಗೆ ಎಲ್.ನಾಗೇಂದ್ರ ತಿರುಗೇಟು ನೀಡಿದರು.
ಬಿಜೆಪಿಯಲ್ಲಿದ್ದು ಕವರ್ ಸಂಸ್ಕೃತಿ ಬಗ್ಗೆ ಮಾತನಾಡಬಾರದಿತ್ತು. ಯಾರ ಬಗ್ಗೆ , ಏಕೆ ಮಾತನಾಡಿದ್ದಾರೆ ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರ ವರ್ತನೆ ಬದಲಾಯಿಸಿಕೊಳ್ಳಲಿ ಎಂದು ಎಲ್.ನಾಗೇಂದ್ರ ಕಿಡಿ ಕಾರಿದರು.
Key words: politics, court stay, L.Nagendra, Pratap Simha







