ಕುಸುಮ್‌-ಸಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸಿ- ಗೌರವ್‌ ಗುಪ್ತ

ಮೈಸೂರು, ಜುಲೈ 18, 2025 (www.justkannada.in): ನೀರಾವರಿ ಪಂಪ್‌ ಸೆಟ್‌ಗಳಿಗೆ ಹಗಲಿನ ವೇಳೆಯೇ  ಸಮರ್ಪಕ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕುಸುಮ್‌-ಸಿ ಯೋಜನೆಯನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿದ ರಾಜ್ಯದ ನಂಬರ್‌ 1 ಎಸ್ಕಾಂ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ   ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಗಮಿತ(ಸೆಸ್ಕ್‌) ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಸೂಚನೆ ನೀಡಿದರು.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ನಿಗಮ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನ ವೇಳೆಯಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕುಸುಮ್‌-ಸಿ ಯೋಜನೆ ಅತ್ಯಂತ ಸಹಕಾರಿಯಾಗಲಿದೆ. ಆದ್ದರಿಂದ ಕುಸುಮ್‌-ಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಮುಂದಿನ ಕೆಲವೇ ತಿಂಗಳುಗಳಲ್ಲಿ ರೈತರ ವಿದ್ಯುತ್‌ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ  ನಿಗಮದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು” ಎಂದರು.

“ಕುಸುಮ್‌-ಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ರಾಜ್ಯದ ನಂಬರ್‌ 1 ಎಸ್ಕಾಂ ಎಂಬ ಖ್ಯಾತಿ ಪಡೆಯುವಂತೆ ಮಾಡಲು ಅಧಿಕಾರಿಗಳು ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡಬೇಕಿದೆ. ಸೆಸ್ಕ್‌ ವ್ಯಾಪ್ತಿಯಲ್ಲಿ ಈಗಾಗಲೇ ಕುಸುಮ್‌-ಸಿ ಯೋಜನೆಯನ್ನು ಅನುಷ್ಠಾನಗೊಳಿವಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಜತೆಗೆ ಎಲ್ಲೆಲ್ಲಿ ಭೂಮಿ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸಬೇಕಿದ್ದು, ಈ ನಿಟ್ಟಿನಲ್ಲಿ ಉದ್ಯಮಿಗಳು ಹಾಗೂ ರೈತರ ಜತೆಗೆ ಮಾತುಕತೆ ನಡೆಸಿ ಕುಸುಮ್‌-ಸಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿಯನ್ನು ಪಡೆಯಲು ಪ್ರಯತ್ನಿಸಬೇಕು” ಎಂದು ಸೂಚಿಸಿದರು.

ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ:

“ನಿಗಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಚುರುಕಾಗಿ ಕೆಲಸ ಮಾಡುವುದರ ಜತೆಗೆ ಸಮಸ್ಯೆಗಳು ಕಂಡುಬಂದಲ್ಲಿ ಶೀಘ್ರವೇ ಸ್ಪಂದಿಸಬೇಕು.  ಇಲ್ಲದಿದ್ದಲ್ಲಿ ಜನರ ಆಕ್ರೋಶಕ್ಕೆ  ಗುರಿಯಾಗುತ್ತೇವೆ. ಹಾಗಾಗಿ,  ಜವಾಬ್ದಾರಿ ಅರಿತು ಕೆಲಸ ಮಾಡಬೇಕು” ಎಂದು ನಿಗಮದ ಎಇಇಗಳಿಗೆ ಅಪರ ಮುಖ್ಯಕಾರ್ಯದರ್ಶಿಗಳು ಸೂಚನೆ ನೀಡಿದರು.  “ಬಿಲ್ಲಿಂಗ್‌, ಮೀಟರ್‌ ರೀಡಿಂಗ್‌, ಮೀಟರ್‌ಗಳ ಪರಿಶೀಲನೆ, ಅಕ್ರಮ ವಿದ್ಯುತ್‌ ಸಂಪರ್ಕಗಳು ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಆಗಬೇಕು.  ಮುಖ್ಯವಾಗಿ,  ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಬೇಕು.” ಎಂದು ಸಲಹೆ ನೀಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು, ಗಂಗಾ ಕಲ್ಯಾಣ ಯೋಜನೆ, ಕುಡಿಯುವ ನೀರು ಸರಬರಾಜು ಯೋಜನೆ, ಪಿಎಂ ಜನಮನ್‌, ಹಾಡಿಗಳ ವಿದ್ಯುತೀಕರಣ ಯೋಜನೆಗಳ ಪ್ರಗತಿ ಹಾಗೂ ನಿಗಮ ವ್ಯಾಪ್ತಿಯಲ್ಲಿ ಮಾಡಲಾಗಿರುವ ಫೀಡರ್‌ ನಿರ್ವಹಣೆ, ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ, ಐಪಿ ಸೆಟ್‌ಗಳ ನೋಂದಣಿ ಇನ್ನಿತರ ವಿಷಯಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಸೆಸ್ಕ್‌ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶರಣಮ್ಮ ಎಸ್‌. ಜಂಗಿನ, ಆಡಳಿತ ಮತ್ತು ಮಾನವ ಸಂಪನ್ಮೂಲ ಶಾಖೆಯ ಪ್ರಧಾನ ವ್ಯವಸ್ಥಾಪಕರಾದ ಬಿ.ಆರ್.‌ ರೂಪ ಸೇರಿದಂತೆ ಮುಖ್ಯ ಇಂಜಿನಿಯರ್‌ಗಳು, ನಿಗಮದ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

“ಕುಸುಮ್‌-ಸಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ 153 ಸಬ್‌ ಸ್ಟೇಷನ್‌ಗಳಿಂದ 842.16 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಕಾರ್ಯಾದೇಶ ಪತ್ರ ನೀಡಲಾಗಿದೆ. 100 ಸಬ್‌ ಸ್ಟೇಷನ್‌ಗಳಿಂದ 566.3 ಮೆಗಾ ವ್ಯಾಟ್‌ ಉತ್ಪಾದನೆಗೆ ಪಿಪಿಎ ಕಾರ್ಯಗತ ಮಾಡಲಾಗಿದೆ. ಇದರಲ್ಲಿ ಎಲ್ಲ ವಿಭಾಗದ ಇಇ ಗಳಿಗೆ ಮೂರು ತಿಂಗಳಲ್ಲಿ ಕನಿಷ್ಠ 5 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಬೇಕೆಂದು ಟಾರ್ಗೆಟ್‌ ನೀಡಲಾಗಿದೆ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ತಿಳಿಸಿದರು.vtu

Key words: speedy, implementation ,Kusum-C scheme, Gaurav Gupta, Mysore