ಕಾವೇರಿ ನೀರು ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೇ ದಸರಾ ಹಬ್ಬದ ದಿನ ಎಲ್ಲ ರಸ್ತೆಗಳ ಬಂದ್ ಚಳುವಳಿ-ಕುರುಬೂರು ಶಾಂತಕುಮಾರ್ ಎಚ್ಚರಿಕೆ.

ಬೆಂಗಳೂರು,ಅಕ್ಟೋಬರ್,13,2023(www.justkannada.in):  ಸರ್ಕಾರ ಕೂಡಲೇ ಅಧಿವೇಶನ ಕರೆದು ತಮಿಳುನಾಡಿಗೆ ಕಾವೇರಿ  ನೀರು ಹರಿಸುವುದನ್ನ ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೆ ದಸರಾ ಹಬ್ಬದ ದಿನ ಎಲ್ಲ ರಸ್ತೆಗಳ ಬಂದ್ ಚಳುವಳಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ  ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

ಕಾವೇರಿ ನೀರಿನ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ.  ಇಂದು ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ   ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗೆ ಉರುಳುಸೇವೆ ಮಾಡಲಾಯಿತು. ಈ ವೇಳೆ ಪ್ರತಿಭಟನಕಾರರು ಉರುಳುಸೇವೆ ಮಾಡುವುದನ್ನು ಪೊಲೀಸರು ತಡೆದಿದ್ದು,  ಈ ಸಮಯದಲ್ಲಿವಾಗ್ವಾದ ನಡೆಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ಜನರನ್ನ ದಿಕ್ಕು ತಪ್ಪಿಸುತ್ತಿದೆ. ಹೋರಾಟವನ್ನು ಹಗುರವಾಗಿ ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ನೀರು ನಿಲ್ಲಿಸುವ ಧೈರ್ಯ ಇಲ್ಲದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ನಿರ್ಣಯ ಮಂಡಿಸಿ ಕೇಂದ್ರಕ್ಕೆ ಎಚ್ಚರಿಸಲಿ ಎಂದು ಸಲಹೆ ನೀಡಿದರು.

ಬೆಂಗಳೂರು ನಗರದ ಎಲ್ಲಾ ಶಾಸಕರ ಮನೆ ಮುಂದೆ 15ರಂದು ಸಂಘ ಸಂಸ್ಥೆಗಳು ಬಾಯಿ ಬಡಿದುಕೊಳ್ಳುವ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಗುರುದೇವ್ ನಾರಾಯಣ ಕುಮಾರ್ ,ವೆಂಕಟಸ್ವಾಮಿ, ಕೆ ಕೆ ಮೋಹನ್, ರಾಜಪ್ಪ ಕಿರುಗಸೂರು ಶಂಕರ್  ಮುಖಂಡರುಗಳು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Key words: Kuruburu Shanthakumar – bandh -movement – roads -stop -Cauvery -water