ಬೆಂಗಳೂರು,ಫೆಬ್ರವರಿ,18,2026 (www.justkannada.in): ಅರಣ್ಯಗಳಲ್ಲಿ ಸಫಾರಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಖಂಡನೀಯ. ಸಫಾರಿ ಆರಂಭಕ್ಕೆ ನೀಡಿರುವ ಅನುಮತಿ ನಿರ್ಧಾರ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಗ್ರಾಮಗಳ ರೈತರ ಕಷ್ಟ ಅರಿಯದೆ ಕಾಡು ಪ್ರಾಣಿಗಳು ಜನರ ಪ್ರಾಣ ಹಾನಿ ಮಾಡುತ್ತಿದ್ದರೂ ಲೆಕ್ಕಿಸದೆ ಬಂಡವಾಳ ಶಾಹಿ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದು ಸಫಾರಿ ಆರಂಭಕ್ಕೆ ಅನುಮತಿ ನೀಡಿರುವುದು ಖಂಡನಿಯ. ಕೂಡಲೇ ನಿರ್ಧಾರ ವಾಪಾಸ್ ಪಡಬೇಕು ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದರು.
ಕಾಡಿನಲ್ಲಿ ನಡೆಯುವ ಸಫಾರಿಯಿಂದ ಕಾಡು ಪ್ರಾಣಿಗಳು ಭಯಭೀತಿಯಿಂದ ಕಾಡಿನ ಹೊರಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಹಾಗೂ ರೈತರ ಬೆಳೆಗಳನ್ನ ನಾಶ ಮಾಡುತ್ತಿವೆ. ಇದು ಸರ್ಕಾರಕ್ಕೆ ತಿಳಿದಿದ್ದರೂ ಒತ್ತಡಕ್ಕೆ ಮಣಿದು ಸಫಾರಿ ಅನುಮತಿ ನೀಡಿದ್ದಾರೆ.
ಪ್ರಾಣಿಗಳ ಸಂಖ್ಯೆ ಏರಿಕೆಯಾಗಿದೆ ಕಾಡು ಪ್ರದೇಶ ಕಡಿಮೆಯಾಗಿದೆ ಎಂಬುದನ್ನ ಸರ್ಕಾರವೇ ಹೇಳುತ್ತದೆ. ಈ ರೀತಿ ಆದರೆ ಪ್ರಾಣಿಗಳ ಸ್ವೇಚ್ಛ ವರ್ತನೆಯ ಓಡಾಟಕ್ಕೆ ಕಷ್ಟವಾಗಿ ಹೊರಗೆ ಬರುತ್ತಿವೆ ಎಂಬುದನ್ನು ಸರ್ಕಾರ ಅರಿತಿದೆ. ಸರ್ಕಾರಕ್ಕೆ ಬರುವ ಆದಾಯ ಮುಖ್ಯವಾಗಬಾರದು. ಜನ ಬದುಕು ಮುಖ್ಯವಾಗಿರಬೇಕು ಎಂಬುದನ್ನು ಸರ್ಕಾರ ಅರಿಯಬೇಕು. ಅರಣ್ಯ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾರ ವಾಪಾಸ್ ಪಡೆಯಲಿ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
Key words: protest, decision, safari, begin, Kuruburu Shanthakumar







