NDRF ಮಾನದಂಡ ತಿದ್ದುಪಡಿ ಮಾಡಿ ರೈತರ ಬೆಳೆ ನಷ್ಟ ಪರಿಹಾರ ಹೆಚ್ಚಿಸಲಿ- ಕುರುಬೂರು ಶಾಂತಕುಮಾರ್

 

ಮೈಸೂರು,ಅಕ್ಟೋಬರ್,24,2025 (www.justkannada.in): ಎನ್ ಡಿಆರ್ ಎಫ್  ಮಾನದಂಡ ತಿದ್ದುಪಡಿ ಮಾಡಿ ರೈತರಿಗೆ ಮಳೆ ಹಾನಿ, ಪ್ರವಾಹ ಹಾನಿ, ಪ್ರಕೃತಿ ವಿಕೋಪ, ಬೆಳೆ ನಷ್ಟ ಪರಿಹಾರವನ್ನ ಹೆಚ್ಚಳ ಮಾಡಲಿ  ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಇಂದು  ಜಿಲ್ಲೆಯ ನೂರಾರು ರೈತರು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಶಾಸಕರು ಸಂಸದರು ಸಚಿವರು ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿಕೊಳ್ಳುತ್ತಾರೆ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಸಂಬಳ ಏರಿಕೆ ಮಾಡುತ್ತಾರೆ ಆದರೆ ರೈತರ ಬೆಳೆ ನಷ್ಟ ಪರಿಹಾರ ಮಾನದಂಡವನ್ನು ಎಂಟು ವರ್ಷವಾದರೂ ಏರಿಕೆ ಮಾಡುವುದಿಲ್ಲ. ಎಲ್ಲ ಜನಪ್ರತಿನಿಧಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ.  ಮಳೆ ಹಾನಿ, ಪ್ರವಾಹ ಹಾನಿ, ಪ್ರಕೃತಿ ವಿಕೋಪ, ಬೆಳೆ ನಷ್ಟ ಪರಿಹಾರ ಎನ್ ಡಿ ಆರ್ ಎಫ್  ಮಾನದಂಡ ತಿದ್ದುಪಡಿ ಮಾಡಿ ಪರಿಹಾರ ಹೆಚ್ಚಳ ಮಾಡಲಿ. ಪ್ರಸಕ್ತ ಇರುವ ಪರಿಹಾರ ಅವೈಜ್ಞಾನಿಕವಾಗಿದೆ. ಮಳೆ ಆಶ್ರಯದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 25,000, ನೀರಾವರಿ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 40,000, ವಾಣಿಜ್ಯ ಬೆಳೆಗಳಿಗೆ ಎಕರೆಗೆ 60,000 ಗಳಿಗೆ ಏರಿಕೆ ಮಾಡಲಿ ಎಂದು ಆಗ್ರಹಿಸಿದರು.

ಬೆಳೆ ನಷ್ಟದ ಪರಿಹಾರ ಎನ್ ಡಿ ಆರ್ ಎಫ್ ಮಾನದಂಡ ಕಳೆದ ಎಂಟು ವರ್ಷಗಳಿಂದ  ಅವೈಜ್ಞಾನಿಕವಾಗಿದ್ದು ಪುನರ್ ಪರಿಶೀಲನೆ ಆಗಿಲ್ಲ ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಿ ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಮಳೆ ಹಾನಿ ಪ್ರವಾಹ ಹಾನಿ ರೈತರ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಪಂಜಾಬ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್ 5000 ಕೋಟಿ ನೀಡಲಿ ಈ ಬಗ್ಗೆ ರಾಜ್ಯದ ಕೇಂದ್ರ ಸಚಿವರು ಸಂಸದರು ಒತ್ತಾಯಿಸಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒತ್ತಾಯಿಸುತ್ತದೆ ಎಂದರು.

ಮನವಿ ಪತ್ರ ಸ್ವೀಕರಿಸಿದ ಹೆಡ್ ಕ್ವಾಟರ್ಸ್ ತಹಸೀಲ್ದಾರ್ ಶಿವಪ್ರಸಾದ್ ಹಾಗೂ ಜಿಲ್ಲಾ ಕೃಷಿ ಉಪ ನಿರ್ದೇಶಕ ರಾಜು ಅವರು ಮಾತನಾಡಿ ಜಿಲ್ಲಾಧಿಕಾರಿಗಳು  ಬೆಂಗಳೂರಿನಿಂದ ಬಂದ ತಕ್ಷಣ ಈ ಬಗ್ಗೆ ಚರ್ಚಿಸಿ ರೈತ ಮುಖಂಡರ ಸಭೆ ಕರೆಯುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ,  ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಹಂಪಾಪುರ ರಾಜೇಶ್, ದೇವನೂರು ಮಹದೇವಪ್ಪ, ಕುರುಬೂರು ಪ್ರದೀಪ್, ರಂಗರಾಜ, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ಗಿರೀಶ್, ಕೂರ್ಗಳ್ಳಿ ರವಿಕುಮಾರ್, ನಂಜುಂಡಸ್ವಾಮಿ, ವಾಜಮಂಗಲ ಮಹದೇವು, ನಾಗೇಂದ್ರ.ಪಿ, ಪುಟ್ಟೇಗೌಡನಹುಂಡಿ ರಾಜು, ಮಾಸ್ಟರ್ ಶಿವಶಂಕರ್, ವರಕೋಡು ಜಯರಾಮ್,  ಕೆರ್ನಳ್ಳಿ ಬಾಲು ಇನ್ನು ಮುಂತಾದವರು ಇದ್ದರು.

Key words: increase, crop,  compensation, farmers, Kuruburu Shanthakumar