ಅಪಘಾತದಲ್ಲಿ ಮೃತಪಟ್ಟ ನಾಲ್ವರು ನೌಕರರ ಅವಲಂಬಿತರಿಗೆ KSRTCಯಿಂದ ತಲಾ 1 ಕೋಟಿ ರೂ. ವಿಮಾ ಪರಿಹಾರ ವಿತರಣೆ.

ಬೆಂಗಳೂರು,ಜೂನ್,12,2024 (www.justkannada.in):  ಅಪಘಾತದಲ್ಲಿ ಮೃತಪಟ್ಟ ನಾಲ್ವರು ನೌಕರರ ಅವಲಂಬಿತರಿಗೆ ಕೆಎಸ್ ಆರ್ ಟಿ ವತಿಯಿಂದ ತಲಾ 1 ಕೋಟಿ ರೂ. ವಿಮಾ ಪರಿಹಾರ ವಿತರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಪಘಾತದಲ್ಲಿ ಮೃತರಾಗುವ ನೌಕರರಿಗೆ 1 ಕೋಟಿ ವಿಮಾ ಪರಿಹಾರ ಘೋಷಣೆ ಮಾಡಿತ್ತು. ಇದಲ್ಲದೇ ಕುಟುಂಬ ಕಲ್ಯಾಣ ಯೋಜನೆಯಡಿ ಸೇವೆಯಲ್ಲಿದ್ದು ಮೃತಪಟ್ಟಂತ 23 ಮಂದಿ ನೌಕರರ ಅವಲಂಭಿತರಿಗೆ ತಲಾ 10 ಲಕ್ಷ ಪರಿಹಾರ ನೀಡಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸೇವೆಯಲ್ಲಿದ್ದ ನೌಕರರ 4 ಅವಲಂಭಿತರಿಗೆ ಅಪಘಾತ ಪರಿಹಾರ ( On duty / Off duty) ವಿಮೆ ತಲಾ ರೂ.1 ಕೋಟಿ ಒಟ್ಟು ಇಲ್ಲಿಯವರೆಗೆ ಇದೂ ಸೇರಿ 17 ಸಿಬ್ಬಂದಿಗಳ ಕುಟುಂಬಕ್ಕೆ ವಿಮಾ‌ ನೀಡಲಾಗಿದೆ. ಕುಟುಂಬ ಕಲ್ಯಾಣ ಯೋಜನೆಯಡಿ 23 ಮಂದಿ ಸೇವೆಯಲ್ಲಿದ್ದು ಮೃತ ಪಟ್ಟ ನೌಕರರ ಅವಲಂಬಿತರಿಗೆ ತಲಾ ರೂ.10 ಲಕ್ಷ ಪರಿಹಾರ ಹಣ ನೀಡಲಾಗಿದೆ.

ಇಲ್ಲಿಯವರೆಗೆ ಇದೂ ಸೇರಿ ಒಟ್ಟು 39 ಸಿಬ್ಬಂದಿಗಳ ಕುಟುಂಬಕ್ಕೆ ಹಣ ನೀಡಿಕೆ ಮತ್ತು ನಿಗಮದ ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕ್ಕೊಳಪಟ್ಟು ಮೃತರಾದ 04 ಪ್ರಯಾಣಿಕರ ಅವಲಂಭಿತರಿಗೆ ತಲಾ ರೂ.10 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ.

ಈ ಕುರಿತು ಇಂದು ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವರಾದ  ರಾಮಲಿಂಗಾರೆಡ್ಡಿ, ಮಾತನಾಡಿ, ನಿಗಮದ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಪ್ರಯಾಣಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೃತಪಟ್ಟವರ ಜೀವ ಅಮೂಲ್ಯವಾದದ್ದು, ಅದನ್ನು ಮರಳಿ ತರಲಾಗುವುದಿಲ್ಲ. ಆದರೆ ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ನಿಗಮವು ರೂಪಿಸಿರುವ ಯೋಜನೆ ದೂರದೃಷ್ಠಿಯನ್ನು ಹೊಂದಿರುವುದಾಗಿ ತಿಳಿಸಿದರು. ಈ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಕಟ್ಟಿಕೊಳ್ಳಲು ಉಪಯೋಗಿಸಿಕೊಳ್ಳಿ , ಬೇರೆ ಇತರೆ ಎಲ್ಲೂ ಹಣ ಪೋಲು ಮಾಡದಂತೆ ಎಚ್ಚರವಹಿಸಲು ತಿಳಿಸಿದರು.

ನಿಗಮವು ಯಶಸ್ವಿಯಾಗಿ ಶಕ್ತಿ ಯೋಜನೆ ಅನುಷ್ಠಾನಗೊಳಿಸಲು ಮುಖ್ಯ ಪಾತ್ರ ವಹಿಸಿರುವ ನಿಗಮದ ಚಾಲಕರು,ನಿರ್ವಾಹಕರು, ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರುಗಳ ಪಾತ್ರ ಅಭಿನಂದನೀಯ ಎಂದು ತಿಳಿಸಿದರು. ನಿಗಮದ ವಿದ್ಯಾ ಚೇತನ ವಿದಾರ್ಥಿ ವೇತನ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು.

ಅಧ್ಯಕ್ಷರು  ಕ.ರಾ.ರ.ಸಾ ನಿಗಮ. ಶ್ರೀನಿವಾಸ್ ಗುಬ್ಬಿ  ಮಾತನಾಡಿ ನಿಗಮದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಶ್ರಮ ಜೀವಿಗಳಾಗಿದ್ದು ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿರುತ್ತದೆ. ಇಂದು ವಿತರಿಸಲಾಗಿರುವ ಪರಿಹಾರ ಮೊತ್ತವನ್ನು ಕುಟುಂಬ ವರ್ಗದವರು ಸಮರ್ಪಕವಾಗಿ ಬಳಸಿಕೊಂಡು ಕುಟುಂಬದ ಆರ್ಥಿಕ ಸ್ವಾವಲಂಬನೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿಸಿದರು.

ಸಾರಿಗೆ ಸುರಕ್ಷಾ ರೂ. 1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಭಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ಇದುವರೆವಿಗೂ 13 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದ್ದು, ಇಂದು 04 ಮೃತ ಸಿಬ್ಬಂದಿಗಳ ಅವಲಂಭಿತರಿಗೆ ತಲಾ ರೂ.1 ಕೋಟಿ ಅಪಘಾತ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಒಟ್ಟು ಇಲ್ಲಿಯವರೆಗೆ 17 ಸಿಬ್ಬಂದಿಗಳ ಕುಟುಂಬಕ್ಕೆ ತಲಾ 1 ಕೋಟಿ ಹಣ ನೀಡಲಾಗಿದೆ

ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:

ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಭಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ಜಾರಿಗೆ ಬರುವಂತೆ ರೂ.10 ಲಕ್ಷಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.

ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆವಿಗೂ 16 ಪ್ರಕರಣಗಳಲ್ಲಿ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು, ಕಳೆದ ಡಿಸೆಂಬರ್ 2023 ರ ನಂತರ ಮಾಹೆಗಳಲ್ಲಿ ಮರಣ ಹೊಂದಿದ 23 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳ ಪರಿಹಾರದ ಚೆಕ್ ನ್ನು ವಿತರಿಸಲಾಯಿತು. ಇಲ್ಲಿಯವರೆಗೆ 39 ಸಿಬ್ಬಂದಿಗಳ ಕುಟುಂಬದವರಿಗೆ ಪರಿಹಾರ ವಿತರಿಸಲಾಗಿದೆ.

3 ನಿಗಮದ ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕೊಳಪಟ್ಟು ಮೃತರಾದ 04 ಪ್ರಯಾಣಿಕರ ಅವಲಂಭಿತರಿಗೆ ತಲಾ ರೂ.10 ಲಕ್ಷ ಪರಿಹಾರ ವಿತರಣೆ.

ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದ್ದುದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ರೂ.3,00,000/- (ರೂ.ಮೂರು ಲಕ್ಷ ಮಾತ್ರ) ದಿಂದ ರೂ.10,00,000/- (ರೂ.ಹತ್ತು ಲಕ್ಷ ಮಾತ್ರ) ಗಳಿಗೆ ದಿನಾಂಕ: 01-01-2024 ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆಗೂ ಓರ್ವ ಪ್ರಯಾಣಿಕರ ಅವಲಂಭಿತರಿಗೆ ರೂ.10.00 ಲಕ್ಷಗಳ ಪರಿಹಾರವನ್ನು ಒದಗಿಸಲಾಗಿದ್ದು, ಇಂದು 4 ಮೃತ ಪ್ರಯಾಣಿಕರ ಅವಲಂಭಿತರಿಗೆ ತಲಾ ರೂ.10.00 ಲಕ್ಷಗಳ ಅಪಘಾತ ಪರಿಹಾರ ಚೆಕ್ ನೀಡಲಾಯಿತು

ಕಾರ್ಯಕ್ರಮದಲ್ಲಿ. ವಿ.ಅನ್ಬುಕುಮಾರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಅನಂತಸುಬ್ಬರಾವ್, ವಿಜಯಭಾಸ್ಕರ್,.ರೇವಪ್ಪ,.ಮಂಜುನಾಥ್, ಚಂದ್ರಶೇಖರ್, ಶ್ರೀ ನಾಗರಾಜು, ವೆಂಕಟರಮಣಪ್ಪ, ಜಯರಾಜ ಅರಸು ಇತರರು  ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Key words: KSRTC, employees, accident, insurance, compensation