ಮೈಸೂರು,ಮಾರ್ಚ್,2,2026 (www.justkannada.in): ತಿ.ನರಸೀಪುರ ಪಟ್ಟಣದ ರೇಷ್ಮೆ ನೂಲು ಉತ್ಪಾದನಾ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ ಮಲ್ಲೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ತಿ.ನರಸೀಪುರ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ಇಲ್ಲ. ಇದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಕ್ರೀಡಾಂಗಣ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಈ ನಡುವೆ ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆಯಿರುವುದರಿಂದ ಕೆಎಸ್ ಐಸಿ ಸುಪರ್ದಿಯಲ್ಲಿರುವ 12 ಎಕರೆ ಪ್ರದೇಶದಲ್ಲಿ 5 ಎಕರೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಮೊದಲೇ ಕೆಎಸ್ ಐಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ವೇಳೆ ಕೆಎಸ್ ಐಸಿ ಅಧಿಕಾರಿಗಳು ಕ್ರೀಡಾಂಗಣ ನಿರ್ಮಾಣಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಇಷ್ಟಾದರೂ ಪ್ರತಿಪಕ್ಷಗಳ ಕುಮ್ಮಕ್ಕಿನಿಂದ ಅವರು ಹೇಳುತ್ತಿರುವ ಸುಳ್ಳನ್ನೇ ನಿಜವೆಂದು ನಂಬಿ ಅಲ್ಲಿನ ಸಿಬ್ಬಂದಿ ಕಾರ್ಖಾನೆ ಮುಚ್ಚುತ್ತಾರೆ ಎಂದು ಪ್ರತಿಭಟನೆ ನಡೆಸುತ್ತಿರುವುದು ಅನಗತ್ಯವಾಗಿದೆ. ಕೆಎಸ್ ಐಸಿ ಉತ್ಪಾದನಾ ಘಟಕ ಮುಚ್ಚುವಂತಿದ್ದರೆ ಅದಕ್ಕೆ ಕ್ರೀಡಾಂಗಣ ನಿರ್ಮಾಣದ ಅಗತ್ಯವೇನು? ಇದನ್ನು ಮನಗಂಡು ಸಿಬ್ಬಂದಿ ಪ್ರತಿಭಟನೆ ವಾಪಸ್ ಪಡೆದು ಕಾರ್ಖಾನೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸ್ಥಳಾವಕಾಶದ ಕೊರತೆಯಿಂದ ಸಮಸ್ಯೆ
ಕ್ರೀಡಾಂಗಣಕ್ಕೆ ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ. ಕ್ರೀಡಾಂಗಣವನ್ನು ಪಟ್ಟಣದಿಂದ ಹೊರಗೆ ದೂರದಲ್ಲಿ ಎಲ್ಲೋ ನಿರ್ಮಿಸಲು ಸಾಧ್ಯವಿಲ್ಲ. ಹಾಗೊಮ್ಮೆ ನಿರ್ಮಿಸಿದರೆ ಅಲ್ಲಿಗೆ ಕ್ರೀಡಾಪಟುಗಳು ತೆರಳಿ ಅಭ್ಯಾಸ ನಡೆಸುವುದು ಕಷ್ಟಸಾಧ್ಯ. ಈ ಹಿನ್ನೆಲೆ ಕೆಎಸ್ ಐಸಿ ಆವರಣದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಕಾರ್ಖಾನೆಯನ್ನು ಮುಚ್ಚುವ ಯಾವುದೇ ಉದ್ದೇಶವಿಲ್ಲ. ಇದನ್ನು ಅಲ್ಲಿನ ಸಿಬ್ಬಂದಿ, ಸಾರ್ವಜನಿಕರು ಅರಿಯಬೇಕು ಎಂದು ಕೆ.ವಿ ಮಲ್ಲೇಶ್ ತಿಳಿಸಿದರು.
ಕಾರ್ಖಾನೆಯೂ ಅಭಿವೃದ್ಧಿಯಾಗಲಿ
ಕ್ರೀಡಾಂಗಣದ ಅಭಿವೃದ್ಧಿ ಜತೆಗೆ ಸರ್ಕಾರ ಪಾರಂಪರಿಕ ಕಾರ್ಖಾನೆಯ ಅಭಿವೃದ್ಧಿಗೂ ಗಮನಹರಿಸಬೇಕಿದೆ. ರಾಜಪ್ರಭುತ್ವದ ಅಡಿಯಲ್ಲಿ ಪ್ರಾರಂಭಗೊಂಡು ಪ್ರಜಾಪ್ರಭುತ್ವದಲ್ಲಿಯೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಕಾರ್ಖಾನೆಗೆ ಸರ್ಕಾರ ಅಗತ್ಯ ಭೂಮಿ, ಹೆಚ್ಚುವರಿ ಸ್ಥಳಾವಕಾಶ ನೀಡಬೇಕು. ಅಲ್ಲದೆ, ಕಾರ್ಖಾನೆಯನ್ನು ಪಟ್ಟಣದ ಹೊರಹೊಲಯಕ್ಕೆ ಸ್ಥಳಾಂತರಿಸಿ ಸುಸಜ್ಜಿತ ಕಟ್ಟಡ, ಸಿಬ್ಬಂದಿಗೆ ವಸತಿ ನಿಲಯ, ಹೊಸ ಯಂತ್ರೋಪಕರಣಗಳೊಂದಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಆ ಮೂಲಕ ಪಾರಂಪರಿಕ ಕೊಂಡಿಯೊಂದನ್ನು ಕಾಪಾಡಬೇಕು ಎಂದು ಕೆ.ವಿ. ಮಲ್ಲೇಶ್ ಹೇಳಿದ್ದಾರೆ.
Key words: Rumors, KSIC factory, K.V. Mallesh







