Thursday, July 30, 2026

BDA Apartments

Home Front Page KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿ 2,016 ಕೋಟಿ ರೂ. ವಹಿವಾಟಿನ ವಿಕ್ರಮ

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿ 2,016 ಕೋಟಿ ರೂ. ವಹಿವಾಟಿನ ವಿಕ್ರಮ

ಬೆಂಗಳೂರು,ಏಪ್ರಿಲ್,28,2026 (www.justkannada.in): ನೂರತ್ತು ವರ್ಷಗಳ ಇತಿಹಾಸವಿರುವ, ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆ.ಎಸ್.ಡಿ.ಎಲ್) 2025-26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿದ್ದು, 507 ಕೋಟಿ ರೂ. ಲಾಭ ಗಳಿಸಿದೆ. ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ .ಬಿ ಪಾಟೀಲ್ ಹೇಳಿದ್ದಾರೆ.

ಸಂಸ್ಥೆಯ ಈ ಅಪೂರ್ವ ಸಾಧನೆಯ ಸಂಭ್ರಮಾಚರಣೆಯ ನಿಮಿತ್ತವಾಗಿ ನಗರದ ಖಾಸಗಿ ಹೋಟೆಲಿನಲ್ಲಿ ಏರ್ಪಡಿಸಿದ್ದ ಮೈಸೂರು ಸ್ಯಾಂಡೆಲ್ ನ ಸಾಧನೆಯ ಶಿಖರ ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ 2 ಸಾವಿರ ಕೋಟಿ ರೂ. ಮಟ್ಟವನ್ನು ಕೇವಲ ನಾಲ್ಕು ವರ್ಷಗಳಲ್ಲಿ ತಲುಪಿದೆ. ಅದರಲ್ಲೂ 2022-23 ರಲ್ಲಿ 1,375 ಕೋಟಿ ರೂ. ವಹಿವಾಟು ನಡೆಸಿದ್ದ ಸಂಸ್ಥೆಯು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ 2,016 ಕೋಟಿ ರೂ. ತಲುಪಿದೆ. ಇಷ್ಟು ಅಲ್ಪಾವಧಿಯಲ್ಲಿ ಕೆ.ಎಸ್.ಡಿ.ಎಲ್ ವಹಿವಾಟು 641 ಕೋಟಿ ರೂ.ಗಳನ್ನು ಹೆಚ್ಚಳ ಕಂಡಿದೆ ಎಂದಿದ್ದಾರೆ.

ಮೊದಲು ಸಂಸ್ಥೆಯು ಕೇವಲ 34 ಉತ್ಪನ್ನಗಳನ್ನು ಹೊಂದಿತ್ತು. ಮೂರು ವರ್ಷಗಳಲ್ಲಿ ನಾವು 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈಗ ಒಟ್ಟು 94 ಉತ್ಪನ್ನಗಳಿವೆ. ಯಾವುದೇ ಹೊಸ ನೇಮಕಾತಿ ಇಲ್ಲದೆ, ಯಂತ್ರೋಪಕರಣಗಳ ಖರೀದಿ ಇಲ್ಲದೆ ಇದನ್ನೆಲ್ಲ ಸಾಧಿಸಲಾಗಿದೆ. ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ 26 ಸಾವಿರ ಮೆಟ್ರಿಕ್ ಟನ್ ಇದ್ದರೂ ಪರಿಣಾಮಕಾರಿ ಕಾರ್ಯವಿಧಾನದ ಮೂಲಕ 2025-26ರಲ್ಲಿ 47 ಸಾವಿರ ಮೆಟ್ರಿಕ್ ಟನ್ ಉತ್ಪಾದಿಸಲಾಗಿದೆ. ಬಂದಿರುವ 507 ಕೋಟಿ ರೂ. ಲಾಭದಲ್ಲಿ ಸರಕಾರಕ್ಕೆ 157 ಕೋಟಿ ರೂ. ಲಾಭಾಂಶ (ಡಿವಿಡೆಂಡ್) ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ ಹಸ್ತಾಂತರಿಸಲಾಗುವುದು. ಹೋದ ವರ್ಷ 135 ಕೋಟಿ ರೂ. ಕೊಡಲಾಗಿತ್ತು. ಇದರಲ್ಲಿ ಈಗ 22 ಕೋಟಿ ರೂ. ಹೆಚ್ಚಳವಾಗಿದೆ ಎಂದು  ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್ ವಹಿವಾಟು ಇರಲಿಲ್ಲ. ನಂತರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಕ್ಕೆ 2025-26ನೇ ಸಾಲಿನಲ್ಲಿ ಆಧುನಿಕ ವ್ಯಾಪಾರ ವಹಿವಾಟಿನಲ್ಲಿ 420 ಕೋಟಿ ರೂ. ಮತ್ತು ಇ-ಕಾಮರ್ಸ್ ವಿಧಾನದಲ್ಲಿ 120 ಕೋಟಿ ರೂ. ದಾಖಲಿಸಿದೆ. ಒಟ್ಟಾರೆಯಾಗಿ ಸಂಸ್ಥೆಯ ವಹಿವಾಟನ್ನು 2028ರ ಹೊತ್ತಿಗೆ 3 ಸಾವಿರ ಕೋಟಿ ರೂ. ಮತ್ತು 2030ರ ಹೊತ್ತಿಗೆ 5 ಸಾವಿರ ಕೋಟಿ ರೂ.ಗಳಿಗೆ ಕೊಂಡೊಯ್ಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ 50 ಎಕರೆಯಲ್ಲಿ ನೂತನ ಉತ್ಪಾದನಾ ಘಟಕ ಆರಂಭವಾಗಲಿದ್ದು, ಇದಕ್ಕೆ 229 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು  ವಿವರಿಸಿದ್ದಾರೆ.

ರೈತರಿಗೆ ಉತ್ತೇಜನ

ಸಂಸ್ಥೆಯ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆಯೇ ಮೂಲವಸ್ತುವಾಗಿದೆ. ಇದರ ಸುಗಮ ಪೂರೈಕೆಗೆ ಸಂಸ್ಥೆಯು ರೈತರೊಂದಿಗೆ ಕೈಜೋಡಿಸಿದ `ಗ್ರೋ ಮೋರ್ ಸ್ಯಾಂಡಲ್’ ಕಾರ್ಯಕ್ರಮ ರೂಪಿಸಿದೆ. ಇದರಡಿಯಲ್ಲಿ 10 ವರ್ಷಗಳಲ್ಲಿ 10 ಸಾವಿರ ಎಕರೆ ಗಂಧದ ನೆಡುತೋಪು ಬೆಳೆಸಲಾಗುವುದು. ಇದಕ್ಕಾಗಿ ರೈತರಿಗೆ ಪ್ರತೀ ಗಂಧದ ಗಿಡಕ್ಕೆ 3 ವರ್ಷಗಳಿಗೆ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಜತೆಗೆ ಬೆಂಗಳೂರಿನ ಜಿಕೆವಿಕೆ ಮತ್ತು ವಿಜಯಪುರದ ಕೃಷಿ ವಿದ್ಯಾಲಯಗಳ ಸಹಯೋಗದಲ್ಲಿ ಶ್ರೀಗಂಧದ ಅಧ್ಯಯನ ಪೀಠ ತೆರೆಯಲಾಗುವುದು ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ನಮ್ಮ ಸರಕಾರ ಬಂದು ಮೂರು ವರ್ಷಗಳಾದ ಮೇಲೆ ಹೊಸ ಯಂತ್ರೋಪಕರಣಗಳ ಖರೀದಿಗೆ 15 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಅಲ್ಲದೆ, ವಿದೇಶಗಳಿಗೆ ರಫ್ತು ಮತ್ತು ಅಖಿಲ ಭಾರತ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ರೈತರಿಂದಲೇ ನೇರವಾಗಿ 174 ಟನ್ ಗಂಧ ಖರೀದಿಸಿದ್ದು, 6.08 ಕೋಟಿ ರೂ.ಗಳನ್ನು ನೇರ ಪಾವತಿ ಮಾಡಿದೆ ಎಂದಿದ್ದಾರೆ.

ಸಂಸ್ಥೆಯು ಬೆಂಗಳೂರು, ಡಾಬಸಪೇಟೆ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಖಾಲಿ ಜಾಗ ಹೊಂದಿದ್ದು, ಇವುಗಳ ಸದ್ಬಳಕೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದು ಸಾಧ್ಯವಾದರೆ ಸಂಸ್ಥೆಯ ಪಾಲಿಗೆ ಆರ್ಥಿಕ ಹರಿವಿನ ಶಾಶ್ವತ ಸಂಪನ್ಮೂಲವೊಂದು ಸೃಷ್ಟಿಯಾಗಲಿದೆ ಎಂದು ಎಂ.ಬಿ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಾಧನೆಗೆ ಶ್ರಮಿಸಿದ ನೌಕರರಿಗೆ ಪ್ರೋತ್ಸಾಹ ಧನ ಕೂಡ ನೀಡಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷರು ಮತ್ತು ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಿ.ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ಕಾರ್ಖಾನೆಯ ಈ ಸಾಧನೆಗೆ ಸಹಕರಿಸಿದ ಸಚಿವ ಪಾಟೀಲ್ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು

ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಿಗೆ ಹೋಗಿ ಸಾಬೂನು ಮಾರಾಟ ವಿಸ್ತರಣೆಗೆ ಪ್ರಯತ್ನ ಮಾಡಿದ್ದೇವೆ. ಆಧುನಿಕ ಮಾರಾಟ ವ್ಯವಸ್ಥೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದು ಇವತ್ತಿನ ಸಾಧನೆಗೆ ಕಾರಣವಾಯಿತು ಎಂದು ನಾಡಗೌಡ ಹೇಳಿದರು.

ಮುಂದಿನ ದಿನಗಳಲ್ಲಿ ಯುನೈಟೆಡ್ ಎಮಿರೇಟ್ಸ್ ದೇಶಗಳಲ್ಲಿಯೂ ಮಾರುಕಟ್ಟೆ ವಿಸ್ತರಣೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಸೋಪು ಮಾತ್ರವಲ್ಲದೆ, ಕಾಸ್ಮೆಟಿಕ್, ಸುಗಂಧ ದ್ರವ್ಯ ವಿಭಾಗದಲ್ಲೂ ಉತ್ಪನ್ನಗಳನ್ನು ಮಾರುಕಟ್ಟೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿಕೆಎಂ ಪ್ರಶಾಂತ್ ಮಾತಮಾಡಿ, ಸಂಸ್ಥೆಯ ನೌಕರರಿಗೆ 4.83 ಕೋಟಿ ರೂಪಾಯಿಯನ್ನು ವೇತನ ಒಪ್ಪಂದದ ಮೂಲಕ ನೀಡಲಾಗಿದೆ. 20 ಕೋಟಿ ರೂಪಾಯಿ ಕ್ಯಾಂಪಸ್ ಸಂರಕ್ಷಣೆ ವಿನಿಯೋಗಿಸಲಾಗಿದೆ ಎಂದರು

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಸಂಸ್ಥೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Key words: KSDL, achieves, achievement, turnover ,Rs 2,016 crore