ಬೆಂಗಳೂರು,ಮೇ,3,2025 (www.justkannada.in): ರಾಜ್ಯಾದ್ಯಂತ 2025 ನೇ ಸಾಲಿನ SSLC ಫಲಿತಾಂಶವು ಪ್ರಕಟಗೊಂಡಿದೆ. ರಾಜ್ಯದ ಶೇಕಡಾವಾರು ಫಲಿತಾಂಶವು 62.34 ರಷ್ಟಿರುವ ವೇಳೆಯಲ್ಲೇ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವಂತಹ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳು ಮಾತ್ರ ಗಣನೀಯ ಸಾಧನೆ ಮಾಡಿದ್ದು ಸುಮಾರು 91 % ಫಲಿತಾಂಶ ಸಾಧನೆ ಮಾಡಿದೆ.
ಇದು ಸರ್ಕಾರದ ಇತರೆ ಶಾಲೆಗಳು ಮತ್ತು ಅನುದಾನ ರಹಿತ ಖಾಸಗೀ ಶಾಲೆಗಳಿಗಿಂತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮಕ್ಕಳು ಸುಮಾರು 28% ನಷ್ಟು ಫಲಿತಾಂಶವಾರು ಸಾಧನೆ ಮಾಡಿದ್ದಾರೆ.
ಏನಿದು ಕ್ರೈಸ್ :
ಕ್ರೈಸ್ ಎಂಬುದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವಾಗಿದ್ದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ವಸತಿ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ.
ವಿಶೇಷವೆಂದರೆ ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಅಲೆಮಾರಿಗಳು, ಪೌರಕಾರ್ಮಿಕರು, ಮಾಜಿ ದೇವದಾಸಿಯರ ಮಕ್ಕಳು, ಜೀತ ಮುಕ್ತ ಮಕ್ಕಳು, ವಿಕಲಾಂಗರು, ಸ್ಮಶಾನ ಕಾರ್ಮಿಕರು, ಏಕ ಪೋಷಕರು, ಚಿಂದಿ ಆಯುವವರ ಮಕ್ಕಳು ಮತ್ತು ಇನ್ನಿತರೆ ದುರ್ಬಲ ವರ್ಗದ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಶಾಲಾ ದಾಖಲಾತಿಯನ್ನು ನೀಡುತ್ತಿರುವ ಈ ಶಾಲೆಗಳು ಬಹಳಷ್ಟು ವೈಶಿಷ್ಟ್ಯವನ್ನು ಹೊಂದಿವೆ.
ಈ ವಸತಿ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದು ತಮ್ಮ ಗುಣಮಟ್ಟದ ಕಾರಣಕ್ಕೆ ಈ ವಸತಿ ಶಾಲೆಗಳು ಕ್ರಮೇಣ ಜನಪ್ರಿಯತೆಯನ್ನು ಗಳಿಸುತ್ತಿವೆ.
ಈ ಬಾರಿಯ SSLC ಪರೀಕ್ಷೆಗೆ ಹಾಜರಾದ ಕ್ರೈಸ್ ವಸತಿ ಶಾಲೆಯ ಸುಮಾರು 34984 ಮಂದಿ ವಿದ್ಯಾರ್ಥಿಗಳ ಪೈಕಿ 31726 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಈ ಪೈಕಿ 34.10% ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು 55.90% ಶೇಕಡಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಸರಾಸರಿ ಶೇಕಡಾವಾರು ಅಂಕಗಳನ್ನು ಗಮನಿಸಿದಾಗ ಅದು 78% ಇದ್ದು ಕ್ರೈಸ್ ವಸತಿ ಶಾಲೆ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ನಮ್ಮ ವಸತಿ ಶಾಲೆಯ ಮಕ್ಕಳ ಶೈಕ್ಷಣಿಕ ಸಾಧನೆಯು ರಾಜ್ಯದ ಇತರೆ ಶಾಲಾ ಮಕ್ಕಳಿಗಿಂತಲೂ ಉತ್ತಮವಾಗಿದ್ದು, ಸಾಮಾಜಿಕ ನ್ಯಾಯ ಸಾಧನೆಗೆ ಶಿಕ್ಷಣವನ್ನೇ ಅಸ್ತ್ರವನ್ನಾಗಿ ನಾವು ಬಳಸುತ್ತಿದ್ದೇವೆ ಎಂದು ಹೇಳಿದರು.
ಇನ್ನು SSLC ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜು ಅವರು ” ಈ ಬಾರಿ ನಮ್ಮ ವಸತಿ ಶಾಲೆಯ ಫಲಿತಾಂಶವು ಇತರರಿಗಿಂತ ಬಹಳಷ್ಟು ಉತ್ತಮವಾಗಿದ್ದು ಒಟ್ಟಾರೆ 91% ಸಾಧನೆ ಮಾಡಿದ್ದೇವೆ. ಮುಂಬರುವ ವರ್ಷದಲ್ಲಿ 100% ಶೈಕ್ಷಣಿಕ ಸಾಧನೆಯು ನಮ್ಮ ಆದ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
Key words: SSLC Result, KREIS, Residential Schools