362 ಮಂದಿ ನೇಮಕಾತಿಗೆ ವಿರೋಧಿಸಿ ಪ್ರತಿಭಟನೆ: ಮರು ಪರೀಕ್ಷೆಗೆ ಆಗ್ರಹ.

ಬೆಂಗಳೂರು,ಫೆಬ್ರವರಿ,13,2022(www.justkannada.in): ಹೈಕೋರ್ಟ್‌, ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪಟ್ಟಿಗೆ ಮರುಜೀವ ನೀಡಿ, ಅಕ್ರಮವಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ರಾಜ್ಯ ದಲಿತ ಪದವೀಧರರ ಸಂಘ ಮತ್ತು ಈ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಹೋರಾಟ ಸಮಿತಿಯ ವತಿಯಿಂದ  ಪ್ರತಿಭಟನೆ ನಡೆಸಿತು.

ನಗರದ ಮೌರ್ಯವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ 2011ನೇ ಸಾಲಿನಲ್ಲಿ ಗಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದ ಹಲವು ಅಭ್ಯರ್ಥಿಗಳು ಭಾಗವಹಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು . ಅಲ್ಲದೆ  ಪಾರದರ್ಶಕವಾಗಿ ನೇಮಕಾತಿ ನಡೆಸಿ ಹುದ್ದೆ ನೀಡುವಂತೆ ಆಗ್ರಹಿಸಿದರು. ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಮತ್ತು ಕೆಆರ್‌ಎಸ್‌ ಪಕ್ಷ ಬೆಂಬಲ ನೀಡಿತ್ತು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ದಲಿತ ಪದವೀಧರ ಸಂಘದ ಅಧ್ಯಕ್ಷ ಲೋಕೇಶ್, ‘ಅಯ್ಕೆ ಪಟ್ಟಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಕೂಡಾ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ಎಲ್ಲ ಅಂಶಗಳ ನಂತರವೂ ಕಾಯ್ದೆ ರೂಪಿಸಿ 362 ಅಭ್ಯರ್ಥಿಗಳಿಗೆ ನೇಮಕ ಮಾಡಲು ಸರ್ಕಾರ ಮುಂದಾಗಿರುವುದನ್ನು ನೋಡಿದರೆ ನ್ಯಾಯಾಲಯದ ತೀರ್ಪುಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರ ತನ್ನ ತೀರ್ಮಾನವನ್ನು ಮರುಪರಿಶೀಲಿಸಬೇಕು. ಅಲ್ಲದೆ, ಅ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಮಾತ್ರ ಅವಕಾಶ ನೀಡಿ 362 ಹುದ್ದೆಗಳಿಗೆ ನೇಮಕ ಮಾಡಲು ಮರು ಪರೀಕ್ಷೆ ನಡೆಸಬೇಕು.  ಕಾಯ್ದೆ ರೂಪಿಸಲು ಸರ್ಕಾರ ಮುಂದಾದರೆ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಮನೆಯ ಎದುರು ಧರಣಿ ಕುಳಿತುಕೊಳ್ಳುತ್ತೇವೆ. ಜೊತೆಗೆ ಹಂತ, ಹಂತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಸರ್ಕಾರ ತೀರ್ಮಾನವನ್ನು ಪ್ರಶ್ನಿಸಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು, ಎಐಸಿಸಿಗೆ ದೂರು ಪತ್ರ ಚಳುವಳಿಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

“ಈ ಪಟ್ಟಿಯಲ್ಲಿ ಅಕ್ರಮವಾಗಿ ಸ್ನಾನ ಪಡೆದವರಲ್ಲಿ ಕೆಎಎಸ್. ಐಎಎಸ್, ಐಪಿಎಸ್, ಕೆಪಿಎಸ್‌ಸಿ ಅಧಿಕಾರಿಗಳು ಮತ್ತು ಹಲವು ರಾಜಕಾರಣಿಗಳ ಮಕ್ಕಳು ಇದ್ದಾರೆ. ಅಂಥವರ ಪಟ್ಟಿಯನ್ನು ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಆಯ್ಕೆ ಪಟ್ಟಿಗೆ ಮರುಜೀವ ಎಂದ ಅವರು ಒತ್ತಾಯಿಸಿದರು.

Key words: kpsc-362 post- recruitment-protest