ಮೈಸೂರು ಜಿಲ್ಲೆಗೆ ತಂದಿರುವ ಹೊಸ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

ಮೈಸೂರು,ನವೆಂಬರ್, 29,2022(www.justkannada.in): ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಗೆ ಹೊಸ ಇವಿಎಂಗಳನ್ನು ತಂದಿರುವ ವಿಚಾರ ಸಂಬಂಧ ಇವಿಎಂ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್,  ಮೈಸೂರು ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಿಗೆ 5,635 ಬ್ಯಾಲೆಟ್ ಯೂನಿಟ್ 3,958 ಕಂಟ್ರೋಲ್ ಯೂನಿಟ್ ಗಳನ್ನು ತರಿಸಲಾಗಿದೆ. ಆದರೆ ಇವು ಹೊಸ ವಿದ್ಯನ್ಮಾನ ಮತದಾನದ ಯಂತ್ರಗಳಾಗಿವೆ. ಇದುವರೆಗೂ ಎಲ್ಲೂ ಬಳಕೆಯಾಗದ ಮತಯಂತ್ರಗಳನ್ನು ತರಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಹಳಷ್ಟು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಹೊಸ ಮತ ಯಂತ್ರಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೊಸ ಮತಯಂತ್ರಗಳನ್ನು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತಯಾರಿಸಿದೆ. ಆದರೆ ಇವುಗಳ ನಿರ್ವಹಣೆ ಮಾಡುವುದನ್ನು ಮುಂಬೈ ಮೂಲದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ  ಎಡೆ ಮಾಡಿಕೊಟ್ಟಿದೆ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪ್ರತಿಯೊಂದು ಮತಯಂತ್ರದ ಡೆಮೋ ಮಾಡಬೇಕು‌. ಆ ಮೂಲಕ ಮತಯಂತ್ರಗಳ ಬಗ್ಗೆ ವ್ಯಕ್ತವಾಗಿರುವ ಅನುಮಾನವನ್ನು ದೂರ ಮಾಡಬೇಕು ಎಂದು ಹೇಳಿದರು.

ಪೊಲೀಸರಿಗೆ ಸಿಗದ ರೌಡಿ ಶೀಟರ್ ಬಿಜೆಪಿಯವರಿಗೆ ಸಿಗುತ್ತಾನೆಂಬುದು ಆಶ್ಚರ್ಯ.

ಬೆಂಗಳೂರು ರೌಡೀಶೀಟರ್ ಪಟ್ಟಿಯಲ್ಲಿ ಮೊದಲಿಗನಾಗಿರುವ ಮೋಸ್ಟ್ ವಾಂಟೆಡ್‌ ಸೈಲೆಂಟ್ ಸುನಿಲ್ ಪೊಲೀಸರಿಗೆ ಸಿಗದಿದ್ದವನು ಬಿಜೆಪಿಯವರಿಗೆ ಸಿಗುತ್ತಾನೆಂಬುದು ಆಶ್ಚರ್ಯಕರವಾಗಿದೆ. ರೌಡಿಶೀಟರ್ ಸೈಲೆಂಟ್ ಸುನೀಲ್ ವಿರುದ್ಧ 17 ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಕೆಲವು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದರೂ ರೌಡಿಶೀಟರ್ ಪಟ್ಟದಿಂದ ಆತ ಇನ್ನೂ ಮುಕ್ತನಾಗಿಲ್ಲ‌‌‌. ಅಂತಹ ಕ್ರಿಮಿನಲ್ ಹಿನ್ನೆಲೆಯುಳ್ಳ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಬಿಜೆಪಿಯ ಮುಖಂಡರು ವೇದಿಕೆ ಹಂಚಿಕೊಂಡಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಯಾಗಿದೆ. ಬಿಜೆಪಿ ಶಾಸಕರ ಪೈಕಿ 47 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. 3 ಸಂಸದರು ಕ್ರಿಮಿನಲ್ ಹಿನ್ನೆಲೆಯುವಳ್ಳವರಾಗಿದ್ದಾರೆ. ಸಚಿವರು, ಸಂಸದರು ಸೇರಿ‌ ಒಟ್ಟು 16 ಮಂದಿ ತಮ್ಮ ವಿರುದ್ಧದ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಕಟಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅದರಲ್ಲಿ ನಮ್ಮ ಮೈಸೂರಿನ ಹೀರೋ‌ ಸಂಸದರು ಸೇರಿದ್ದಾರೆ ಎಂದು  ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೇಕೆದಾಟು ಯೋಜನೆಯನ್ನ ಅಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಡಿಕೆ ಶಿವಕುಮಾರ್ ಇಂದನ ಸಚಿವರಾಗಿದ್ದಾಗ ಜಾರಿಗೆ ತಂದ ಯೋಜನೆ. ಡಿಪಿಆರ್ ತಯಾರಿಸಿ ಸೆಂಟ್ರಲ್ ವಾಟರ್ ಕಮಿಷನ್ ಗೆ ಅನುಮೋದನೆ ಸಲ್ಲಿಸಿದ್ದರು. ನಂತರ ಮೇಕೆದಾಟಿಗಾಗಿ ಕಾಂಗ್ರೆಸ್ ವತಿಯಿಂದ ದೊಡ್ಡ ಪಾದಯಾತ್ರೆ ಕೂಡ ನಡೆಯಿತು ಅದು  ಯಶಸ್ವಿಯಾಯಿತು. ಬಳಿಕ ಪಾದಯಾತ್ರೆಯಿಂದ ವಿಚಲಿತರಾಗಿ ೨೦೨೨ ರ ಬಜೆಟ್ ನಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ೧೦೦೦ ಕೋಟಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ಮುಂದಿನ ಅಣೆಕಟ್ಟು ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಮಾಡುತ್ತಿದೆ. ಇದರ ಜೊತೆ ಈಗಾಗಲೇ ತಮಿಳುನಾಡಿನ ಸರ್ಕಾರ ಅಣೆಕಟ್ಟು ನಿರ್ಮಾಣದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತರಲಿ ಹೊರಟಿದೆ. ಹೀಗೆ ವಿಳಂಬ ಮಾಡಿದರೆ ಮೇಕೆದಾಟು ಯೋಜನೆ ಹಳ್ಳಹಿಡಿಯುವ ಆತಂಕ ಇದೆ. ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಗ್ರಹಿಸಿದರು.

Key words: KPCC –spokesperson- M. Laxman-  doubts – new- EVMs- Mysore