ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕೋವಿಡ್ ಪರೀಕ್ಷೆಗೆ ಚಾಲನೆ

ಬೆಂಗಳೂರು , ಏಪ್ರಿಲ್ 22,2020: ರಾಜ್ಯದಲ್ಲಿ ಕೊರೋನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸ್ವಾಬ್ ಕಲೆಕ್ಟಿಂಗ್ ಬೂತ್ ಗಳಿಗೆ ಚಾಲನೆ ನೀಡಿದ್ದಾರೆ.

ಸಂಸ್ಥೆಯ ನಿರ್ದೇಶಕ ಡಾ.ರಾಮಚಂದ್ರ ಅವರು, ಕಿದ್ವಾಯಿ ಸಂಸ್ಥೆಯಲ್ಲಿ ದಾಖಲಾಗುವ ಒಳರೋಗಿಗಳ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೊರೋನ ಪರೀಕ್ಷೆಯಲ್ಲಿ ನೆಗೆಟೀವ್ ಬಂದ ರೋಗಿಗಳನ್ನು ಮಾತ್ರ ಮುಂದಿನ ಉನ್ನತ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಚಿವ ಡಾ.ಸುಧಾಕರ್ ಅವರು ಕಿದ್ವಾಯಿ ಸಂಸ್ಥೆಯಲ್ಲಿ ದಾಖಲಾಗಿರುವ ರೋಗಿಗಳ ಹಿತರಕ್ಷಣೆಗಾಗಿ ಮತ್ತು ಸುರಕ್ಷತಾ ದೃಷ್ಟಿಯಿಂದ ಇಲ್ಲಿನ ಒಳರೋಗಿಗಳನ್ನು ಕೂಡ ಕೊರೋನ ಪರೀಕ್ಷೆಗೆ ಒಳಪಡಿಸಲಾಗುವುದೆಂದು ಹೇಳಿಕೆ ನೀಡಿದ್ದರು.

ಕಿದ್ವಾಯಿ ಸಂಸ್ಥೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಕುರಿತಂತೆ ಐಸಿಎಂಆರ್ ನ ಡಾ.ಮಂಜುನಾಥ್ ಅವರು ಮೌಖಿಕ ಅನುಮತಿ ನೀಡಿದ್ದು ಅದರ ಮಾರ್ಗಸೂಚಿಗಳನ್ನು ಈಗಾಗಲೇ ಸಂಸ್ಥೆಗೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮೋದನೆ ದೊರಕುವ ನಿರೀಕ್ಷೆ ಇದೆ. ಇದಕ್ಕಾಗಿ ಬೆಕ್‍ಮ್ಯಾನ್ ಕೌಲ್ಟರ್ ಬಯೋಮೆಕ್ – 4000 ಮತ್ತು ಕ್ವಾಂಟ್ ಸ್ಟುಡಿಯೋ 5 ಉಪಕರಣಗಳನ್ನು ಬಳಸಲಾಗುತ್ತಿದೆ. ಇದು 3:30ಗಂಟೆಯ ಅವಧಿಯೊಳಗೆ 380 ಸ್ಯಾಂಪಲ್ ಗಳ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ಉಪಕರಣವನ್ನು ಅಳವಡಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ತೇಜಸ್ವಿ ಸೂರ್ಯ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ರಾಮಚಂದ್ರ ಅವರು ಉಪಸ್ಥಿತರಿದ್ದರು.