ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಬೆಂಗಳೂರು:ಆ-18: ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಿಂದಿಕ್ಕಿದ್ದು, 56 ವರ್ಷದ ಬಳಿಕ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಮಾಣದ ಮಳೆ ದಾಖಲಾಗಿದೆ.

ಆ.10ರಂದು ಕೊಟ್ಟಿಗೆಹಾರದಲ್ಲಿ ಬರೋಬ್ಬರಿ 572 ಮಿ.ಮೀ ಮಳೆಯಾಗಿದೆ. ದಕ್ಷಿಣದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿದ್ದ ಆಗುಂಬೆಯಲ್ಲಿ 1963ರ ಜು.27ರಂದು 618 ಮಿ.ಮೀ ಮಳೆಯಾಗಿತ್ತು. 1987ರಲ್ಲಿ ಹುಲಿಕಲ್​ನಲ್ಲಿ 548 ಮಿ.ಮೀ ಮಳೆ ಬಿದ್ದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಹುಲಿಕಲ್​ನಲ್ಲಿ ಒಂದೇ ದಿನ ಸರಾಸರಿ 186 ಮೀ.ಮೀ. ಮಳೆ ಸುರಿದಿದೆ. ಈ ವರ್ಷ ಆಗುಂಬೆ ಮತ್ತು ಹುಲಿಕಲ್​ನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ ಒಂದೇ ದಿನ ಅತಿ ಹೆಚ್ಚು ಮಳೆ ಬಿದ್ದಿರುವುದು ವಿಶೇಷ. ಕೊಟ್ಟಿಗೆಹಾರ ನಂತರದಲ್ಲಿ ಕೊಡಗಿನ ಭಾಗಮಂಡಲದಲ್ಲಿ ಆ.9ರಂದು 400 ಮಿ.ಮೀ. ಮಳೆ ಬಿದ್ದಿದೆ.

ಒಂದೇ ಭೌಗೋಳಿಕತೆ: ಆಗುಂಬೆ ಮತ್ತು ಹುಲಿಕಲ್ ಭೌಗೋಳಿಕ, ಪ್ರಾಕೃತಿಕ ಸಂರಚನೆಯಲ್ಲಿ ಒಂದೇ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ, ಮಳೆ ಸುರಿಯುವ ಪ್ರಮಾಣದಲ್ಲಿ ಎರಡು ಪ್ರದೇಶಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆಗುಂಬೆಯಲ್ಲಿ ಹೆಚ್ಚು ದಿನಗಳ ಕಾಲ ಮಳೆ ಬಿದ್ದರೂ ಅದರ ತೀವ್ರತೆ ಕಡಿಮೆ ಇರುತ್ತದೆ. ಹುಲಿಕಲ್​ನಲ್ಲಿ ಕಡಿಮೆ ಮಳೆ ಬಿದ್ದರೂ ತೀವ್ರತೆ ಹೆಚ್ಚಿರುತ್ತದೆ. ಹೀಗಾಗಿ, ಆಗುಂಬೆಯನ್ನು ಹುಲಿಕಲ್ ಹಿಂದಿಕ್ಕಿತ್ತು.

43 ವರ್ಷ ಹುಲಿಕಲ್​ನಲ್ಲಿ ಅತಿ ಹೆಚ್ಚು ಮಳೆ: ಕಳೆದ 56 ವರ್ಷಗಳಲ್ಲಿ 43 ವರ್ಷ ಹುಲಿಕಲ್​ನಲ್ಲಿ ಅತಿ ಹೆಚ್ಚು ಮಳೆಯಾದರೆ, ಆಗುಂಬೆಯಲ್ಲಿ 13 ವರ್ಷ ಅತಿ ಹೆಚ್ಚು ಮಳೆ ಸುರಿದಿದೆ. ಅಲ್ಲದೆ, 45 ವರ್ಷ ಆಗುಂಬೆಯಲ್ಲಿ 23 ಬಾರಿ ಹಾಗೂ ಹುಲಿಕಲ್​ನಲ್ಲಿ 40 ವರ್ಷ 48 ಬಾರಿ 30 ಸೆ.ಮೀ.ಗಿಂತ ಹೆಚ್ಚು ಮಳೆಯಾಗಿದೆ.

ಅರಬ್ಬಿ ಸಮುದ್ರದಲ್ಲಿ ಗಾಳಿ ವೇಗ ಹೆಚ್ಚಿದ್ದರಿಂದ ಕೊಟ್ಟಿಗೆಹಾರದಲ್ಲಿ ಅತಿ ಹೆಚ್ಚು ಮಳೆ ಬೀಳುವುದಕ್ಕೆ ಸಾಧ್ಯವಾಯಿತು. ಬೇರೆಡೆ ಮಳೆ ಪ್ರಮಾಣಕ್ಕೆ ಹೋಲಿಸಿ ದರೆ ಇಲ್ಲಿ ತೀವ್ರತೆ ಜೋರಾಗಿತ್ತು.

| ಚನ್ನಬಸನಗೌಡ ಎಸ್.ಪಾಟೀಲ್ ನಿರ್ದೇಶಕ, ಹವಮಾನ ಇಲಾಖೆ
ಕೃಪೆ:ವಿಜಯವಾಣಿ

ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ
kottigehara-karnataka-floods-landslide-chikkamagaluru-western-ghats-heavy-rain