ಕೋಗಿಲು ಲೇಔಟ್ ಅನಧಿಕೃತ ಶೆಡ್ ತೆರವು ವಿಚಾರ: ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ

ಬೆಂಗಳೂರು,ಡಿಸೆಂಬರ್,31,2025 (www.justkannada.in):  ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್ ತೆರವು ಮತ್ತು ನಿರಾಶ್ರಿತರಿಗೆ ಕಾಂಗ್ರೆಸ್ ಸರ್ಕಾರದಿಂದ ಮನೆ ಕೊಡುವ ವಿಚಾರ ಸಂಬಂಧ ಇಂದು ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋಗಿಲು  ಲೇಔಟ್  ಪ್ರದೇಶಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿದಂತೆ ಮತ್ತಿತರ ನಿಯೋಗ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು.

ಬಳಿಕ  ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋ‍ಕ್, ಇಲ್ಲಿನ ನಿವಾಸಿಗಳು ಕೇವಲ 6 ತಿಂಗಳ ಹಿಂದೆ ಬಂದಿದ್ದಾರೆಂಬ ಮಾಹಿತಿ ಇದೆ. ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಸೇರಿದಂತೆ ಇತರ ದಾಖಲೆಗಳನ್ನು ನೀಡಿದವರು ಯಾರು? ಸತ್ಯಸತ್ಯತೆ ಹೊರಬರಲು ಎನ್‌ಐಎ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದರು.

ಈ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣ ಆಗಿರೋದು ಇತ್ತೀಚೆಗೆ. ಇಲ್ಲಿ ವಾಸಿಸುತ್ತಿರುವವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು. ರಾಜ್ಯದ ತೆರಿಗೆದಾರರಿಗೆ ಈ ಸೌಲಭ್ಯಗಳು ಸಿಗುತ್ತಿಲ್ಲ. ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ಬಾಂಗ್ಲಾದೇಶದವರಿಗೆ ಸಿದ್ದರಾಮಯ್ಯ ಸರ್ಕಾರ ನೀಡಲು ಹೊರಟಿದೆ. ಇದು ಬೆಂಗಳೂರನ್ನು ಮಿನಿ ಬಾಂಗ್ಲಾದೇಶವನ್ನಾಗಿ ಮಾಡುವ ಪ್ರಯತ್ನ ಎಂದು ಆರ್.ಅಶೋಕ್ ಕಿಡಿ ಕಾರಿದ್ದಾರೆ.

Key words: Kogilu Layout, shed, clearance, issue, BJP leaders, visit