Sunday, September 20, 2026

BDA Apartments

Home Front Page ಕೆಎಂಎಫ್ ಕಬಳಿಕೆಯನ್ನು ಒಮ್ಮತದಿಂದ ವಿರೋಧಿಸಿ: ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ- ಮಾಜಿ ಸಿಎಂ...

ಕೆಎಂಎಫ್ ಕಬಳಿಕೆಯನ್ನು ಒಮ್ಮತದಿಂದ ವಿರೋಧಿಸಿ: ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ- ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್

ಬೆಂಗಳೂರು,ಏಪ್ರಿಲ್,7,2023(www.justkannada.in): ನಾಡಿನ ರೈತರು, ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್ ನ ಕಬಳಿಕೆಯ ವಿರುದ್ಧ ಕನ್ನಡಿಗರೆಲ್ಲರೂ ಒಮ್ಮತದಿಂದ ವಿರೋಧಿಸಬೇಕಾಗುತ್ತದೆ. ಅಮುಲ್ ಉತ್ಪನ್ನಗಳನ್ನು ಖರೀದಿಸವುದಿಲ್ಲ ಎಂದು ಕನ್ನಡಿಗರೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ,  ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ  ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ…! ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ @AmitShahಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.ಕೆಎಂಎಫ್ ಕಬಳಿಕೆಯನ್ನು ಒಮ್ಮತದಿಂದ ವಿರೋಧಿಸಿ siddaramaiah siddaramaiah 2

ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ರಾಜ್ಯ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ..? ಎಂದು ಸರ್ಕಾರದ ವಿರುದ್ಧ ಸಿದ‍್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸರ್ಕಾರ ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿದ್ದೆವು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣ ಏನು…? ಎಂದು ಪ್ರಶ್ನಿಸಿರುವ ಸಿದ್ಧರಾಮಯ್ಯ, ನಮ್ಮ ಸರ್ಕಾರವು ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿತ್ತು. ಆದರೆ  ಬಿಜೆಪಿ ಸರ್ಕಾರ 2020 -21 ರಲ್ಲಿ 1186 ಕೋಟಿ ಖರ್ಚು ಮಾಡಿದ್ದರೆ, 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ.

ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಸಿದ್ಧರಾಮಯ್ಯ ಟೀಕಿಸಿದ್ದಾರೆ.

ನಾಡಿನ ರೈತರು, ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್ ನ ಕಬಳಿಕೆಯ ವಿರುದ್ಧ ಕನ್ನಡಿಗರೆಲ್ಲರೂ ಒಮ್ಮತದಿಂದ ವಿರೋಧಿಸಬೇಕಾಗುತ್ತದೆ. ಅಮುಲ್ ಉತ್ಪನ್ನಗಳನ್ನು ಖರೀದಿಸವುದಿಲ್ಲ ಎಂದು ಕನ್ನಡಿಗರೆಲ್ಲರೂ ಪ್ರತಿಜ್ಞೆ ಮಾಡಬೇಕು. ಮುಖ್ಯಮಂತ್ರಿ   ಬೊಮ್ಮಾಯಿ ಅವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Key words: KMF -Pledge -not – buy- Amul- products- Former CM- Siddaramaiah