ಕಾವೇರಿ ಹಿನ್ನೀರಿನ ಈ ಪ್ರದೇಶಗಳು ನಿಷೇಧಿತ ಪ್ರದೇಶವೆಂದು ಘೋಷಣೆ

ಮೈಸೂರು,ಸೆಪ್ಟಂಬರ್,18 (www.justkannada.in): ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಇಲವಾಲ ಠಾಣಾ ಸರಹದ್ದಿನ ಕಾವೇರಿ ಹಿನ್ನೀರು ಪ್ರದೇಶಕ್ಕೆ ಒಳಪಡುವ ಕೆಲಗ್ರಾಮಗಳಿಗೆ ಹೊಂದಿಕೊಂಡಂತ ಹಿನ್ನೀರಿನ ಪ್ರದೇಶವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಸೆಕ್ಷನ್ 163ರ ರೀತ್ಯಾ ನಿಷೇಧಿತ ಪ್ರದೇಶವೆಂದು  ಘೋಷಿಸಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು,  ಕೃಷ್ಣರಾಜ ಸಾಗರ ಅಣೆಕಟ್ಟೆ ತುಂಬಿರುವ ಹಿನ್ನಲೆಯಲ್ಲಿ ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಇಲವಾಲ ಠಾಣಾ ಸರಹದ್ದಿನ ಕಾವೇರಿ ಹಿನ್ನೀರು ಪ್ರದೇಶಕ್ಕೆ ಒಳಪಡುವ ಗ್ರಾಮಗಳಾದ ಮೀನಾಕ್ಷಿಪುರ, ಆನಂದೂರು, ಹಳೇ ಉಂಡವಾಡಿ, ಯಡಹಳ್ಳಿ ಸಾಗರಕಟ್ಟೆ, ರಾಮೇನಹಳ್ಳಿ ಮಲ್ಲೇಗೌಡನಕೊಪ್ಪಲು, ಚೋಳೇನಹಳ್ಳಿ, ಯಾಚೇಗೌಡನಹಳ್ಳಿ ಎಸ್.ಹೆಮ್ಮನಹಳ್ಳಿ ಹೊಸಕೋಟೆ, ಕಲ್ಲೂರು ನಾಗನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಹಿನ್ನೀರಿನ ಪ್ರದೇಶಕ್ಕೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಠಿಯಿಂದ ಪ್ರವೇಶವನ್ನು ನಿರ್ಬಂಧಿಸಿ, ದಿನಾಂಕ: 16.09.2025 ರಿಂದ ಮುಂದಿನ 06 ತಿಂಗಳವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ -2023 ಸೆಕ್ಷನ್ 163 ರೀತ್ಯಾ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.

ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Key words: Kaveri backwaters, declared, forbidden area, Mysore DC