ನ. 20ರಂದು ಮೈಸೂರಿನಲ್ಲಿ ‘ಕೌದಿ’ ನಾಟಕ ಪ್ರದರ್ಶನ

ಮೈಸೂರು,ನವೆಂಬರ್,18,2025 (www.justkannada.in): ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಅವರ ‘ಬಂಗಾರದ ಮನುಷ್ಯ’ ನಾಟಕದ ಕೃತಿ ಬಿಡುಗಡೆ ಹಾಗೂ ಅವರ ರಚನೆಯ ‘ಕೌದಿ’ ಏಕವ್ಯಕ್ತಿ ನಾಟಕದ 50ನೇ ಪ್ರದರ್ಶನವನ್ನು ನವೆಂಬರ್ 20ರಂದು ಸಂಜೆ 6.30 ಗಂಟೆಗೆ ನಗರದ ಕಲಾಮಂದಿರ ಪಕ್ಕದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಕದಂಬ ರಂಗ ವೇದಿಕೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಟಿ.ಕೆ.ರಾಮರಾವ್ ಅವರ ಕಾದಂಬರಿ ಆಧರಿಸಿ ‘ಬಂಗಾರದ ಮನುಷ್ಯ’ ನಾಟಕವಾಗಿ ಗಣೇಶ ಅಮೀನಗಡ ರಚಿಸಿದ್ದಾರೆ. ಇದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಬಿಡುಗಡೆಗೊಳಿಸುವರು. ಕೃತಿಯನ್ನು ಲೇಖಕ ಡಾ.ಎನ್.ಎಂ.ಗಿರಿಜಾಪತಿ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಭಾಗವಹಿಸುವರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪುಸ್ತಕ ಬಿಡುಗಡೆ ನಂತರ ಕೌದಿ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಈಗಾಗಲೇ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಮೈಸೂರಿನಲ್ಲಿ ಮೊದಲ ಬಾರಿ ಪ್ರದರ್ಶನಗೊಳ್ಳುತ್ತಿದೆ. ಒಂದು ಗಂಟೆ ಅವಧಿಯ ಈ ನಾಟಕವನ್ನು ಕಲಬುರಗಿಯ ಭಾಗ್ಯಶ್ರೀ ಪಾಳಾ ಪ್ರಸ್ತುತಪಡಿಸುವರು. ಇದರ ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ ಜಗದೀಶ್ ಆರ್.ಜಾಣಿ ಅವರದು ಎಂದು ವಿವರಿಸಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ಚಳಿಗಾಲದಲ್ಲಿ ಬೆಚ್ಚಗಿಡುವ ಹಾಗೂ ಬೇಸಿಗೆಯಲ್ಲಿ ತಂಪಾಗಿಡುವ ಕೌದಿಯ ಮಹತ್ವದ ಜೊತೆಗೆ ಕೌದಿ ಹೊಲಿಯುವವರ ಸಂಕಟ, ಸಮಸ್ಯೆ ಹಾಗೂ ಸವಾಲುಗಳ ಅನಾವರಣದ ನಾಟಕವಿದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಕರ್ಮಿಗಳಾದ ಡಿ.ತಿಪ್ಪಣ್ಣ, ಅಶ್ವಥ್ ಕದಂಬ ಹಾಗೂ ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಹಾಜರಿದ್ದರು.

Key words: Kaudhi ,play , Mysore, Nov. 20