ಮುಗಿಯದ ವರುಣನ ಮುನಿಸು

ಬೆಂಗಳೂರು:ಆ-11: ಬರದಿಂದ ತತ್ತರಿಸಿದ್ದ ರಾಜ್ಯದ ಜನತೆ ಇದೀಗ ನೆರೆ ಹಾವಳಿಗೆ ಬೆಚ್ಚಿ ಬಿದ್ದಿದ್ದು, ಉತ್ತರ ಕರ್ನಾಟವನ್ನು ಮುಳುಗಿಸಿರುವ ಪ್ರವಾಹ ದಕ್ಷಿಣದತ್ತ ತನ್ನ ಕಂಬಂಧ ಬಾಹುಗಳನ್ನು ವಿಸ್ತರಿಸಿದ್ದು, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಆತಂಕ ಸೃಷ್ಟಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ 5 ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಮತ್ತೆ ಗುಡ್ಡ ಕುಸಿತ ಆರಂಭವಾಗಿದ್ದು, ಶನಿವಾರ 18 ಜನ ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ ನೇತ್ರಾವತಿ, ಕುಮಾರಧಾರಾ ಹಾಗೂ ಫಲ್ಗುಣಿ ಸಹಿತ ಪ್ರಮುಖ ನದಿಗಳು ಹಳ್ಳಗಳಲ್ಲಿ ಪ್ರವಾಹ ಉಕ್ಕೇರಿದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡಿವೆ, 500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಮಲೆನಾಡಿನಲ್ಲಿ ತುಂಗೆ ಮತ್ತು ಭದ್ರೆಯರು ಆರ್ಭಟಿಸುತ್ತಿದ್ದು ತುಂಗೆಯ ಪ್ರವಾಹಕ್ಕೆ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ. ನಗರದ ಹಲವು ಬಡಾವಣೆ ನಿವಾಸಿಗಳಿಗೆ ಶುಕ್ರವಾರ ರಾತ್ರಿ ದುಸ್ವಪ್ನವಾಗಿ ಕಾಡಿತು. ಉಟ್ಟ ಬಟ್ಟೆಯಲ್ಲೇ ಸಾವಿರಾರು ಮಂದಿ ಮನೆ ತೊರೆದು ಪರಿಹಾರ ಕೇಂದ್ರ ಸೇರಿದರು. 36 ವರ್ಷಗಳ ಬಳಿಕ ಶಿವಮೊಗ್ಗ ನೆರೆಯಿಂದ ನಲುಗಿತು. ಕೆಲವರು ಬೆಲೆಬಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಪರಿಹಾರ ಕೇಂದ್ರ ಸೇರಿದರೆ, ಇನ್ನು ಕೆಲವರು ಜೀವ ಉಳಿದರೆ ಸಾಕು ಎಂದು ಎಲ್ಲವನ್ನೂ ಬಿಟ್ಟು ಮನೆಯಿಂದ ಹೊರನಡೆದಿದ್ದಾರೆ. ಕೃಷ್ಣಾ ನದಿ ಪಾತ್ರದಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು, ನದಿಯಲ್ಲಿ ದಿನದಿಂದ ದಿನಕ್ಕೆ ಪ್ರವಾಹ ಹೆಚ್ಚುತ್ತಲೇ ಇರುವುದರಿಂದ ಜನಜೀವನ ಸಂಪೂರ್ಣ ಕೊಚ್ಚಿ ಹೋಗಿದೆ.

ಪತಿ ಭಾವಚಿತ್ರಕ್ಕಾಗಿ ಕಣ್ಣೀರಿಟ್ಟ ಮಹಿಳೆ

ಜಮಖಂಡಿ ತಾಲೂಕಿನ ಹಿರೇಪಡಸಲಗಿ ಜಲಾವೃತವಾಗಿದ್ದರಿಂದ ತನ್ನನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವಾಗ ಪತಿಯ ಫೋಟೋ ಬಿಟ್ಟು ಬಂದಿದ್ದರಿಂದ ವೃದ್ಧೆ ಶಾಂತಾಬಾಯಿ ಗೌಡಗಾವಿ ಕಣ್ಣೀರಿಟ್ಟರು. ನನ್ನ ಪತಿ ದಿ. ಧರ್ಮಣ್ಣ ಗೌಡಗಾವಿ ಅವರ ಭಾವಚಿತ್ರ ಫೋಟೊ ತಂದುಕೊಡಿ, ಇಲ್ಲ ನಾನೇ ವಾಪಸ್ ಹೋಗಿ ತರುತ್ತೇನೆ ಎಂದು ಕಂಬನಿ ಸುರಿಸಿದರು. ನಂತರ ಅಧಿಕಾರಿಗಳು ಅವರನ್ನು ಸಂತೈಸಿದರು.

ಮಾಜಿ ಸಚಿವ ಜನಾರ್ದನ ಪೂಜಾರಿ ಸ್ಥಳಾಂತರ

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಮನೆಯ ಸುತ್ತಮುತ್ತಲೂ ನೆರೆ ನೀರು ಆವರಿಸಿದ್ದು ಸಂಪರ್ಕ ಕಡಿತಗೊಂಡಿತ್ತು. ಶುಕ್ರವಾರವೇ ನೆರೆ ಆವರಿಸಿದ್ದರೂ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಶನಿವಾರ ಪ್ರವಾಹ ಏರಿಕೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಮನೆಗೆ ತೆರಳಿ ದೋಣಿಯ ಮೂಲಕ ರಕ್ಷಿಸಿದ್ದು, ಮಂಗಳೂರಿನ ರ್ಸಟ್ ಹೌಸ್​ಗೆ ಸ್ಥಳಾಂತರ ಮಾಡಲಾಗಿದೆ. ಅವರ ಮನೆಯ ಇತರ ಇಬ್ಬರು ಸದಸ್ಯರನ್ನೂ ಸಿಬ್ಬಂದಿ ರಕ್ಷಿಸಿದರು.

ಪ್ರವಾಹಕ್ಕೆ ಸಿಲುಕಿದ್ದ ಕುಟುಂಬ ರಕ್ಷಣೆ

ಮಡಿಕೇರಿ: ಮಡಿಕೇರಿಯ ಮಕ್ಕಂದೂರು-ತಂತಿಪಾಲ ವ್ಯಾಪ್ತಿಯಲ್ಲಿ ಸಿಲುಕಿದ್ದ ಕುಟುಂಬವನ್ನು ಸಂಘ, ಸಂಸ್ಥೆಗಳವರು ರಕ್ಷಿಸಿ, ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಮುಳ್ಳೇರ ತಾರಾ(ಚಾಮಿ) ಅವರ ಕುಟುಂಬದವರು ಮಕ್ಕಂದೂರುನಿಂದ ತಂತಿಪಾಲಕ್ಕೆ ತೆರಳುವ ಮಾರ್ಗದ ಮನೆಯಲ್ಲಿ ಸಿಲುಕಿದ್ದರು. ಮನೆಯಲ್ಲಿ ತಾಯಿ (ಬಾಣಂತಿ), ಶಿಶು, ವೃದ್ಧರಿಬ್ಬರು ವಾಸವಿದ್ದರು. ದೂರವಾಣಿ ಸಂಪರ್ಕ, ವಿದ್ಯುತ್ ಇರಲಿಲ್ಲ. ಮಾಹಿತಿ ತಿಳಿದ ಗ್ರೀನ್ ಸಿಟಿ ಫೋರಂ, ಮಾನವೀಯ ಸ್ನೇಹಿತರ ಒಕ್ಕೂಟ, ಮಡಿಕೇರಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ರಕ್ಷಿಸಿದ್ದಾರೆ. ಇವರಿಗೆ ಇಬ್ಬನಿ ಸ್ಪ್ರಿಂಗ್ಸ್ ರೆಸಾರ್ಟ್ ಮಾಲೀಕ ಚೆಯ್ಯಂಡ ಸತ್ಯ ಕುಟುಂಬಕ್ಕೆ ಆಶ್ರಯ ನೀಡಿದ್ದಾರೆ. ಈ ಕುಟುಂಬಕ್ಕೆ ಬಾಡಿಗೆ ಮನೆ ವ್ಯವಸ್ಥೆ ಮಾಡುವುದಾಗಿ ಮಾನವೀಯ ಸ್ನೇಹಿತರ ಬಳಗದ ಸದಸ್ಯ ಉಮೇಶ್ ತಿಳಿಸಿದ್ದಾರೆ.

ಚಿಕಿತ್ಸೆಗೆ ನೆರವು

ವಿರಾಜಪೇಟೆ ತಾಲೂಕಿನ ಅರಮೇರಿಯ 2 ಕುಟುಂಬದ ದಂಪತಿಯ ಡಯಾಲಿಸಿಸ್​ಗೆ ಅನುಕೂಲವಾಗಲು ಇಬ್ಬನಿ ಸ್ಪ್ರಿಂಗ್ಸ್ ರೆಸಾರ್ಟ್​ನಲ್ಲಿ ಚೆಯ್ಯಂಡ ಸತ್ಯ ಆಶ್ರಯ ನೀಡಿದ್ದಾರೆ. ನಿತ್ಯವೂ ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಬೇಕಿತ್ತು. ಆದರೆ, ಮನೆಯ ಸುತ್ತ ನೀರು ಆವರಿಸಿತ್ತು. ಹೀಗಾಗಿ ಇವರಿಗೆ ಬೋಟ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಕೋರಿದ ಬಳಿಕ ಇವರನ್ನು ರಕ್ಷಿಸಿ ರೆಸಾರ್ಟ್​ಗೆ ಕರೆತಂದು ಅಲ್ಲಿಯೇ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲಾಗಿದೆ.

ನೆರೆ ಆರ್ಭಟಕ್ಕೆ ನಲುಗಿದ ದ.ಕ.

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ಹಾಗೂ ಫಲ್ಗುಣಿ ಸಹಿತ ಪ್ರಮುಖ ನದಿಗಳು ಹಳ್ಳಗಳಲ್ಲಿ ಪ್ರವಾಹ ಉಕ್ಕೇರಿದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡಿವೆ, 500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಘಟ್ಟ ಪ್ರದೇಶದಲ್ಲಿನ ವಿಪರೀತ ಮಳೆಯಿಂದಾಗಿ ನೇತ್ರಾವತಿ ನದಿ ಉಕ್ಕೇರಿದ್ದು, ಶುಕ್ರವಾರ ತಡರಾತ್ರಿಯೇ ಬಂಟ್ವಾಳ, ಪಾಣೆಮಂಗಳೂರಿನಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಇಲ್ಲಿ ಅಪಾಯದ ಮಟ್ಟ 8.5 ಮೀಟರ್ ಇದ್ದು ರಾತ್ರಿ ಅಪಾಯದ ಮಟ್ಟ ಮೀರಿ ಹರಿದ ನೇತ್ರಾವತಿಯ ಮಟ್ಟ 11.6 ಮೀ. ತಲುಪಿತು. ಇದರಿಂದಾಗಿ ಬಂಟ್ವಾಳ ಪೇಟೆ ಪ್ರದೇಶ, ಜಕ್ರಿಬೆಟ್ಟು, ಬಸ್ತಿಪಡ್ಪು, ಪಾಣೆಮಂಗಳೂರು ಮುಂತಾದ ನದಿ ತೀರದ ಜಾಗಗಳಿಗೆ ನೀರು ನುಗ್ಗಿತು. ಇತ್ತ ಮಂಗಳೂರು ತಾಲೂಕಿನ ಗುರುಪುರ, ಕಿನ್ನಿಗೋಳಿ ಭಾಗದಲ್ಲೂ ನೆರೆ ನೀರು ನುಗ್ಗಿದ್ದರಿಂದ ಹತ್ತಾರು ಮನೆಗಳು ಜಲಾವೃತಗೊಂಡವು. ಎನ್​ಡಿಆರ್​ಎಫ್, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ದಳ ಸಿಬ್ಬಂದಿ ರಾತ್ರಿ ಹಗಲೆನ್ನದೆ ರಬ್ಬರ್ ಬೋಟ್ ಸಹಿತ ವಿವಿಧ ಪರಿಕರಗಳೊಂದಿಗೆ ಕಾರ್ಯಾಚರಣೆ ನಡೆಸಿ ವೃದ್ಧರು, ಗರ್ಭಿಣಿಯರು, ಎಳೆಶಿಶುಗಳು, ಮಕ್ಕಳು, ಮಹಿಳೆಯರನ್ನು ರಕ್ಷಿಸಿದರು. ಧರ್ಮಸ್ಥಳ, ಸುಬ್ರಹ್ಮಣ್ಯ ಸ್ನಾನಘಟ್ಟಗಳು ಜಲಾವೃತಗೊಂಡಿದ್ದರೂ, ಶುಕ್ರವಾರಕ್ಕಿಂತ ಶನಿವಾರ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಉಪ್ಪಿನಂಗಡಿಯಲ್ಲಿ ಸಂಗಮ ಸ್ಥಿತಿಯಲ್ಲೇ ನೀರಿನ ಮಟ್ಟ ಮುಂದುವರಿಯಿತು.

ಭೀಕರ ಮಳೆಗೆ 18 ಬಲಿ

ರಾಜ್ಯದ ವಿವಿಧೆಡೆ ಮಳೆ ಅಬ್ಬರ ಮುಂದುವರಿದಿದ್ದು, ಭೂಕುಸಿತ ಸೇರಿ ಹಲವು ಕಾರಣಗಳಿಗೆ 18 ಮಂದಿ ಮೃತಪಟ್ಟಿದ್ದಾರೆ. ಹೆಗ್ಗಳ ಗ್ರಾಮದ ತೋರದಲ್ಲಿ ಭೂಕುಸಿತಕ್ಕೆ ನಾಲ್ವರು ಬಲಿಯಾಗಿದ್ದರೆ, ಶಿವಮೊಗ್ಗ ತಾಲೂಕು ಚೋರಡಿ ಸಮೀಪದ ಕುಮದ್ವತಿ ನದಿಯ ಪ್ರವಾಹವನ್ನು ಹೆದ್ದಾರಿ ಅಂಚಿಗೆ ನಿಂತು ವೀಕ್ಷಿಸುತ್ತಿದ್ದ ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ಸಹೋದರ, ಕುಂಸಿಯ ಕೇಬಲ್ ಆಪರೇಟರ್ ಅಮರನಾಥ್(55)ಗೆ ಜೀಪೊಂದು ಡಿಕ್ಕಿ ಹೊಡೆದಿದ್ದರಿಂದ ಅವರು ನದಿಗೆ ಬಿದ್ದು ತೇಲಿಹೋಗಿದ್ದಾರೆ. ಚಿಕ್ಕಮಗಳೂರು ತಾಲೂಕು ಗೌತಮೇಶ್ವರದ ಕಟ್ಟೆಹೊಳೆ ದಾಟುವಾಗ ರೈತ ಚಂದ್ರೇಗೌಡ (42) ಕೊಚ್ಚಿಹೋಗಿದ್ದರೆ, ಮೂಡಿಗೆರೆ ತಾಲೂಕು ಹೊರಟ್ಟಿಯಲ್ಲಿ ಗುಡ್ಡ ಕುಸಿದು ತಾಯಿ ಶೇಷಮ್ಮ (55), ಮಗ ಸತೀಶ್ (35) ಮೃತಪಟ್ಟಿದ್ದಾರೆ. ಬಣಕಲ್​ನ ಜಾವಳಿ ಹೇಮಾವತಿ ನದಿಯಲ್ಲಿ ಪುರುಷರೊಬ್ಬರ ಶವವೊಂದು ತೇಲಿಬಂದಿದೆ. ಮೂಡಿಗೆರೆ ತಾಲೂಕು ಬಲ್ಲಾಳರಾಯನದುರ್ಗ ಸಮೀಪದ ದುರ್ಗದಹಳ್ಳಿಯಲ್ಲಿ ಹೇಮಾವತಿ ನದಿ ಹಿನ್ನೀರಿನಲ್ಲಿ ಕಾಲುಜಾರಿ ಬಿದ್ದು ಸುಮಂತ್(10), ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ರೈತ ಗ್ರಾಮದ ಬಸಪ್ಪ ಪಾಟೀಲ (54) ಕಲ್ಲಾಪುರ-ವೀರಾಪುರ ಮಧ್ಯದ ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಮೃತಪಟ್ಟಿದ್ದಾನೆ. ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ಸ.ಹಿ.ಪ್ರಾ. ಶಾಲೆಯ ಪರಿಹಾರ ಕೇಂದ್ರದಲ್ಲಿ ವೃದ್ಧ ಭರಮಪ್ಪ ಹವಳೆಪ್ಪನವರ (75) ಹಾಗೂ ಹಾವೇರಿ ನಾಗೇಂದ್ರನಮಟ್ಟಿಯ ಗುಡಿಸಲಿನಲ್ಲಿದ್ದ ವೃದ್ಧ ಮಾರೆಪ್ಪ ಒಂಟೆತ್ತನವರ (70) ಚಳಿಯಿಂದ ಮೃತಪಟ್ಟಿದ್ದಾರೆ. ರಾಣೆಬೆನ್ನೂರ ತಾಲೂಕಿನ ಇಟಗಿ ಗ್ರಾಮದಲ್ಲಿ ಮೇವು ತೆಗೆದು ಕೊಳ್ಳುತ್ತಿರುವಾಗ ಬಣವೆ ಮೈಮೇಲೆ ಬಿದ್ದು ರೈತ ನಾಗಪ್ಪ ಗುಡ್ಡಪ್ಪ ಮುಳಗುಂದ (40) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕಾರವಾರ ಮಲ್ಲಾಪುರ ಟೌನ್​ಶಿಪ್ ಸಮೀಪ ಕದ್ರಾ ನಿವಾಸಿ ಪೇಂಟರ್ ಶ್ಯಾಮಸಂಗ ದಲಬಂಜ್ ನೆರೆ ಪಾಲಾಗಿದ್ದಾರೆ. ಮಂಗಳೂರು ಹೊರ ವಲಯದ ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಸಹಾಯಕ ಮುಅದ್ದಿನ್, ಉಪ್ಪಿನಂಗಡಿ ಗುಂಟೆಬಾಗಿಲು ನಿವಾಸಿ ಅಬ್ದುಲ್ ರಝಾಕ್(45) ಶನಿವಾರ ಕಾಲುಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಜಡೆಕಲ್ಲು ಅಂದ್ರಾಟ ಎಂಬಲ್ಲಿ ಕಾಲುಸಂಕ ಕುಸಿದು ಜನಾರ್ದನ(30) ಎಂಬುವರು ನೀರುಪಾಲಾಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಸಬಾ ಹೋಬಳಿಯ ಬಲ್ಲೇನಹಳ್ಳಿಯಲ್ಲಿ ಮನೆ ಗೋಡೆ ಉರುಳಿ ಮುಬೀನಾ (35) ಶನಿವಾರ ಮೃತಪಟ್ಟಿದ್ದಾರೆ.

ಜೀವ ಕಸಿದ ಭೂಕುಸಿತ

ತೋರ (ವಿರಾಜಪೇಟೆ): ಹೆಗ್ಗಳ ಗ್ರಾಮದ ತೋರದಲ್ಲಿ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ನಾಲ್ವರು ಕಣ್ಮರೆಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಮನೆಯವರ ಕಳೆದುಕೊಂಡ ಪ್ರಭುಕುಮಾರ್ ಭಟ್ ಕಂಗಾಲಾಗಿದ್ದಾರೆ. ತಾಯಿ ಕೆ.ಡಿ.ದೇವಕಿ (72), ಪತ್ನಿ ಕೆ.ಪಿ.ಅನಸೂಯ (36), ಪುತ್ರಿಯರಾದ ಅಮೃತಾ (15), ಅದಿತಿ (9) ಮಣ್ಣು ಪಾಲಾಗಿದ್ದಾರೆ. ಪತ್ತೆ ಕಾರ್ಯ ಮುಂದುವರಿದಿದ್ದು, ಭಾರತೀಯ ಸೇನೆ, ಎನ್​ಡಿಆರ್​ಎಫ್, ಕೊಡಗು ಪೊಲೀಸರೊಂದಿಗೆ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ‘ನಾನು ಬದುಕಿ ಇನ್ನೇನು ಮಾಡಬೇಕು? ಏಕಾಗಿ ಬದುಕಬೇಕು? ನನ್ನ ಕುಟುಂಬವನ್ನು ಬಲಿ ತೆಗೆದುಕೊಂಡ ಸ್ಥಳದಲ್ಲಿಯೇ ನಾನೂ ಸತ್ತು ಹೋಗುತ್ತೇನೆ’ ಎಂದು ಪ್ರಭುಕುಮಾರ್ ಗೋಳುತೋಡಿಕೊಂಡಿದ್ದಾರೆ.

ಗ್ರಹಚಾರ ಕಾಡಿತ್ತು

ತೋರದಲ್ಲಿ ಹರಿಯುತ್ತಿರುವ ಹೊಳೆ ಸಮೀಪದಲ್ಲಿ ಪ್ರಭುಕುಮಾರ್ ಭಟ್ ಮನೆ ಸಹಿತ ಅಂಗಡಿ ಹೊಂದಿದ್ದಾರೆ. ಹೊಳೆ ಅಪಾಯ ಮಟ್ಟ ತಲುಪಿದ್ದರಿಂದ ಮೂರು ದಿನಗಳ ಹಿಂದೆ ತೋರ ಬೆಟ್ಟದಲ್ಲಿರುವ ಹಳೆಯ ಮನೆಗೆ ಬಂದಿದ್ದರು. ಪ್ರಭು ಅಲ್ಲಿಂದ ಎಂದಿನಂತೆ ತಮ್ಮ ಅಂಗಡಿ ಹೋಗಿದ್ದಾರೆ. ಅಂಗಡಿ ಮಳಿಗೆಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಗಾಬರಿಗೊಂಡು ಮನೆಯತ್ತ ಬಂದರೆ, ಮನೆ ನೆಲಸಮವಾಗಿದೆ ಎಂದು ಗೋಳಿಟ್ಟುಕೊಂಡರು. ವಿಪರ್ಯಾಸವೆಂದರೆ ಸುರಕ್ಷಿತ ಎಂದು ಹೋಗಿದ್ದ ಮನೆಯೇ ನೆಲಕಚ್ಚಿದ್ದು, ಮೊದಲಿದ್ದ ಮನೆ ಸುರಕ್ಷಿತವಾಗಿದೆ.

ಫಲ ನೀಡದ ಶೋಧ

ವಿರಾಜಪೇಟೆ ತಾಲೂಕು ಹೆಗ್ಗಳ ಗ್ರಾಮದ ತೋರ ಬೆಟ್ಟ ಕುಸಿದು ಮಣ್ಣು ಪಾಲಾಗಿರುವವರ ಪತ್ತೆಗೆ ಶನಿವಾರ ನಡೆದ ಶೋಧ ಕಾರ್ಯಾಚರಣೆ ವಿಫಲವಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಜನರು ನಾಪತ್ತೆಯಾಗಿದ್ದು, 8 ಜನರ ನಾಪತ್ತೆ ಬಗ್ಗೆ ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ.

ಶಿವಮೊಗ್ಗದಲ್ಲಿ ಜಲಪ್ರಳಯ

ಶಿವಮೊಗ್ಗ: ಮಲೆನಾಡಿನಲ್ಲಿ ತುಂಗೆ ಮತ್ತು ಭದ್ರೆಯರು ಆರ್ಭಟಿಸುತ್ತಿದ್ದು ತುಂಗೆಯ ಪ್ರವಾಹಕ್ಕೆ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ. ಉಟ್ಟ ಬಟ್ಟೆಯಲ್ಲೇ ಸಾವಿರಾರು ಮಂದಿ ಮನೆ ತೊರೆದು ಪರಿಹಾರ ಕೇಂದ್ರ ಸೇರಿದರು. 36 ವರ್ಷಗಳ ಬಳಿಕ ಶಿವಮೊಗ್ಗ ನೆರೆಯಿಂದ ನಲುಗಿತು. ಕೆಲವರು ಜಾನುವಾರು ಹಾಗೂ ಬೆಲೆಬಾಳುವ ವಸ್ತುಗಳನ್ನು ಮಾತ್ರ ತಮ್ಮ ಬಳಿ ಒಯ್ದಿದ್ದಾರೆ. ಜಲಾವೃತವಾದ ಮನೆಗಳು ನೀರಿನಿಂದ ಮುಕ್ತವಾಗಲು ಇನ್ನೂ ಮೂರ್ನಾಲ್ಕು ದಿನ ಬೇಕು. ಒಟ್ಟು ಎರಡೂವರೆ ಸಾವಿರ ಜನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಶನಿವಾರ ಬೆಳಗ್ಗೆ 6 ಸಾವಿರ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಹಳೇ ಶಿವಮೊಗ್ಗದ ಬಹುತೇಕ ಜನವಸತಿ ಪ್ರದೇಶಗಳಲ್ಲಿ ರಸ್ತೆಯೇ ಕಾಣುತ್ತಿಲ್ಲ.

ಕೊಚ್ಚಿಹೋದ ಹಬ್ಬದ ಸಂಭ್ರಮ: ಇಮಾಂ ಬಾಡಾ, ನ್ಯೂ ಮಂಡ್ಲಿ, ಸೀಗೇಹಟ್ಟಿ, ಮಂಡಕ್ಕಿ ಭಟ್ಟಿ ಮುಂತಾದ ಕಡೆ ವಾಸವಾಗಿದ್ದ ಮುಸ್ಲಿಂ ಸಮುದಾಯದವರು ಬಕ್ರೀದ್ ಆಚರಣೆಗೆಂದು ಸಿದ್ಧತೆ ಮಾಡಿಕೊಂಡಿದ್ದರು. ಎಲ್ಲವನ್ನೂ ನೆರೆ ಆಪೋಶನ ತೆಗೆದುಕೊಂಡಿದೆ.

ಖರೀದಿ ಇಲ್ಲ ಟೊಮ್ಯಾಟೊ ಬೆಲೆ ಇಳಿಕೆ

ಕೋಲಾರ: ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಹ ಟೊಮ್ಯಾಟೊ ಸಾಗಣೆಗೆ ತೊಂದರೆಯಾಗಿದ್ದು, ಬೆಲೆ ಇಳಿಕೆ ಕಂಡಿದೆ. 15 ಕೆಜಿ ಬಾಕ್ಸ್​ಗೆ ಕನಿಷ್ಠ 250ರಿಂದ ಗರಿಷ್ಠ 600 ರೂ. ವರೆಗೆ ದರವಿದ್ದು ಮಹಾರಾಷ್ಟ್ರ, ಪಶ್ಚಿಮಬಂಗಾಲ ಸೇರಿ ಉತ್ತರ ಭಾರತದ ಅನೇಕ ಭಾಗಗಳಿಗೆ ಇಲ್ಲಿಂದಲೇ ಸರಬರಾಜಾಗುತ್ತಿತ್ತು. ವಾರದಿಂದೀಚೆಗೆ ಹೊರ ರಾಜ್ಯಗಳಿಂದ ಖರೀದಿದಾರರು ಬಾರದಿರುವುದರಿಂದ ಟೊಮ್ಯಾಟೊ ಸರಬರಾಜು ಆಗುತ್ತಿಲ್ಲ. ಸರಕು ಉಳಿಯುತ್ತಿದ್ದು, 350 ರಿಂದ 550 ರೂ. ಗಡಿ ದಾಟಿದ್ದ ಬೆಲೆ 250ರಿಂದ 300 ರೂ.ಗೆ ಕುಸಿದಿದೆ. ಪ್ರವಾಹ ಹೀಗೆ ಮುಂದುವರಿದರೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಖರೀದಿದಾರರಿಲ್ಲದೆ ಎಪಿಎಂಸಿ ವಹಿವಾಟು ನೀರಸವಾಗಿದೆ.

ತುಟ್ಟಿಯಾಗುತ್ತಿದೆ ಹಣ್ಣು, ತರಕಾರಿ

ಉತ್ತರ ಕರ್ನಾಟಕದಲ್ಲಿ ಶನಿವಾರ ಮಳೆ ಸ್ವಲ್ಪ ಕಡಿಮೆಯಾದರೂ ಪ್ರವಾಹ ಪರಿಸ್ಥಿತಿ ಹಾಗೇ ಇದೆ. ಈ ಮಧ್ಯೆ ಮಧ್ಯಾಹ್ನದ ನಂತರದಲ್ಲಿ ಮತ್ತೆ ಗಾಳಿ ಸಹಿತ ಮಳೆ ಶುರುವಾಗಿದೆ. ಹೀಗಾಗಿ, ಜನರು ಆತಂಕದಿಂದ ಹೊರಗೆ ಬಂದಿಲ್ಲ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಹಾಗೂ ಹುಬ್ಬಳ್ಳಿ ಮಧ್ಯೆ ಸಂಪರ್ಕ ಕಡಿತವಾಗಿರುವುದರಿಂದ ನಿತ್ಯ ಬಳಕೆ ವಸ್ತುಗಳು, ವಾಣಿಜ್ಯ ಉತ್ಪನ್ನಗಳು ಸೇರಿ ಯಾವುದೇ ಸರಬರಾಜು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಿಂದ ಖಾಸಗಿ ಕಂಪನಿ ಹಾಲು ಪೂರೈಕೆಯಾಗುತ್ತಿಲ್ಲ. ತರಕಾರಿ ತೋಟಗಳು ಕೊಚ್ಚಿಕೊಂಡು ಹೋಗಿದ್ದರೆ, ಜಾನುವಾರುಗಳಿಗೆ ಸರಿಯಾದ ಮೇವು ಇಲ್ಲದ್ದರಿಂದ ಹೀಗಾಗಿ, ಉ.ಕ.ದ ಬಹುತೇಕ ಭಾಗದಲ್ಲಿ ಹಾಲು, ಹಣ್ಣು, ತರಕಾರಿ ತುಟ್ಟಿಯಾಗತೊಡಗಿವೆ.

ಅಣೆಕಟ್ಟೆಗಳೆಲ್ಲ ಭರ್ತಿ

ಮುಂಗಾರು ಶುರುವಾಗಿ ಎರಡು ತಿಂಗಳು ಕಳೆದರೂ ಸಮರ್ಪಕ ಮಳೆಯಾಗದೆ ತತ್ತರಿಸಿದ್ದ ರಾಜ್ಯಕ್ಕೆ ಆಗಸ್ಟ್​ನಲ್ಲಿ ವರುಣಾಘಾತವಾಗಿದ್ದು, ದಿಢೀರನೆ ಎದುರಾದ ಪ್ರವಾಹದಿಂದ ಇಡೀ ರಾಜ್ಯ ಸಂಕಷ್ಟಕ್ಕೀಡಾಗಿದೆ. ವಾರದೆ ಹಿಂದಷ್ಟೇ ನೀರಿಲ್ಲದೆ ಸೊರಗಿದ್ದ ರಾಜ್ಯದ ಬಹುತೇಕ ಜಲಾಶಗಳು ಇದೀಗ ಸಂಪೂರ್ಣ ಭರ್ತಿಯಾಗಿದ್ದು, ದಾಖಲೆ ಮಟ್ಟದಲ್ಲಿ ಡ್ಯಾಂಗಳಿಂದ ನೀರು ಹೊರಬಿಡುತ್ತಿರುವುದರಿಂದ ನದಿ ಪಾತ್ರಗಳ ಜನತೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಡ್ಯಾಂಗಳು ಭರ್ತಿಯಾದ ಸಂತಸದ ಬೆನ್ನಿಗೆ ನೆರೆ ಆತಂಕವೂ ಜನರನ್ನು ಕಂಗೆಡಿಸಿದೆ.

ಕಾವೇರಿ ಕಣಿವೆ ಇತಿಹಾಸ: ಜುಲೈ ತಿಂಗಳು ಕಳೆದರೂ ಕೆಆರ್​ಎಸ್ ಮತ್ತು ಹೇಮಾವತಿ ಜಲಾಶಯಗಳಿಗೆ ಕಾಲು ಭಾಗ ನೀರು ಕೂಡ ಬಂದಿರಲಿಲ್ಲ. ಕಬಿನಿ ಮತ್ತು ಹಾರಂಗಿ ಜಲಾಶಯಗಳು ತುಂಬುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ, ಆಗಸ್ಟ್ ಮೊದಲ ವಾರ ಜಲಾಶಯದ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆಯಿತು. ಕೇವಲ ಒಂದು ವಾರದೊಳಗಾಗಿ ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ತುಂಬಿ ಭೋರ್ಗರೆಯುತ್ತಿದ್ದು, ಭರ್ತಿಗೆ ಮೂರ್ನಾಲ್ಕು ಅಡಿಯಷ್ಟೇ ಬಾಕಿ ಇದೆ. ಮಂಗಳವಾರ 85 ಅಡಿ ಇದ್ದ ಕೆಆರ್​ಎಸ್ ನೀರಿನ ಮಟ್ಟ ಶನಿವಾರ ರಾತ್ರಿವೇಳೆಗೆ 117 ಅಡಿ ತಲುಪಿದೆ. (ಗರಿಷ್ಠ 124.80 ಅಡಿ) ಕೂಡ ಬಹುತೇಕ ತುಂಬಿದ್ದು, ಜಲಾಶಯದ ಹಿತ ದೃಷ್ಟಿಯಿಂದ ನೀರು ಹೊರಗೆ ಬಿಡಲಾಗುತ್ತಿದೆ. ನಾಲ್ಕು ಜಲಾಶಯಗಳು ತುಂಬಿರುವುದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ನಿರೀಕ್ಷೆ, ಅಂದಾಜುಗಳನ್ನೆಲ್ಲ ತಲೆಕೆಳಗು ಮಾಡಿದೆ. ಈಗಾಗಲೇ ಜಲಾಶಯವ ವ್ಯಾಪ್ತಿಯ ಜಮೀನುಗಳು, ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಮಳೆ ಹೆಚ್ಚಾದರೆ ಮತ್ತಷ್ಟು ಅಪಾಯ ಎದುರಾಗಲಿದೆ. ಇನ್ನು ಕೃಷ್ಣಾನದಿ ಪಾತ್ರದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಇದರಿಂದ ಉಂಟಾಗಿರುವ ಪರಿಣಾಮ ಕಣ್ಣ ಮುಂದಿದೆ. ಮಲಪ್ರಭ ಜಲಾಶಯ ತುಂಬಿದ ಉದಾಹರಣೆ ಕಡಿಮೆ. ಅಚ್ಚರಿ ಅಂದರೆ ಈ ಬಾರಿ ಆ ಜಲಾಶಯವೂ ತುಂಬಿ ಹರಿದಿದೆ. ತುಂಗಭದ್ರಾ ಕೂಡ ತುಂಬುವುದಿಲ್ಲ ಎನ್ನುವ ಅಭಿಪ್ರಾಯಗಳಿದ್ದವು. ಆಗಸ್ಟ್ ತಿಂಗಳಲ್ಲಿ ಕೃಷ್ಣಾ ಕಣಿವೆಯ ಎಲ್ಲಾ ಜಲಾಶಯಗಳು ತುಂಬಿರುವುದು ವಿಶೇಷ.ಮಲೆನಾಡು ಭಾಗದ ಲಿಂಗನಮಕ್ಕಿ ಇದೇ ರೀತಿ ಮಳೆಯಾದರೆ ಮೂರ್ನಾಲ್ಕು ದಿನಗಳಲ್ಲಿ ಭರ್ತಿಯಾಗಲಿದೆ. ಭದ್ರಾ, ಮಾಣಿ, ಚಕ್ರಾ, ಸಾವೇಹಕ್ಲು ಜಲಾಶಯಗಳು ಭರ್ತಿ ಹಂತದಲ್ಲಿವೆ.

ಬಸವಸಾಗರ ಜಲಾಶಯ ದಾಖಲೆ!

ಕೃಷ್ಣೆಗೆ ಅಡ್ಡಲಾಗಿ ಕಟ್ಟಿರುವ ಬಸವಸಾಗರ ಜಲಾಶಯ 10.97 ಕಿಮೀ ಉದ್ದ ಅಳತೆ ಹೊಂದಿದ್ದು, 33.313 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಜಲಾಶಯ ನಿರ್ವಣವಾಗಿ 37 ವರ್ಷ ಕಳೆದಿದ್ದು, ಇದೇ ಮೊದಲ ಬಾರಿಗೆ ಜಲಾಶಯದಿಂದ ಸುಮಾರು 6.25 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ರೌದ್ರಾವತಾರದಲ್ಲಿ ಹರಿಯುತ್ತಿರುವ ಕೃಷ್ಣೆಯಿಂದ ಯಾದಗಿರಿ, ರಾಯಚೂರು ಜಿಲ್ಲೆಗಳ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಪ್ರಮುಖ ಜಿಲ್ಲೆಗಳ ಮಧ್ಯದ ಸಂಪರ್ಕ ಕಳೆದೊಂದು ವಾರದಿಂದ ಸ್ಥಗಿತಗೊಂಡಿದೆ. ಹತ್ತಾರು ಸಾವಿರ ಎಕರೆ ಜಮೀನು ಸಂಪೂರ್ಣ ಜಲಾವೃತಗೊಂಡು ಕೋಟ್ಯಂತರ ರೂ. ಹಾನಿಯಾಗಿದೆ. ನೀರಿನ ಮಟ್ಟ ಕಡಿಮೆಯಾದ ನಂತರವೇ 2 ಜಿಲ್ಲೆಗಳಲ್ಲಿ ಆಗಿರುವ ನಷ್ಟದ ಸ್ಪಷ್ಟ ಪ್ರಮಾಣ ಗೊತ್ತಾಗಲಿದೆ.

ರದ್ದುಗೊಂಡ ರೈಲುಗಳು

ಯಶವಂತಪುರ- ಮಂಗಳೂರು ಸೆಂಟ್ರಲ್ ಎಕ್ಸ್​ಪ್ರೆಸ್
ಯಶವಂತಪುರ- ಕಾರವಾರ ಎಕ್ಸ್​ಪ್ರೆಸ್,
ಬೆಂಗಳೂರು- ಕಣ್ಣೂರು/ ಕಾರವಾರ, ಕೆಎಸ್​ಆರ್ ಬೆಂಗಳೂರು- ಕಣ್ಣೂರು/ ಕಾರವಾರ ಎಕ್ಸ್​ಪ್ರೆಸ್- ಮೈಸೂರು ಮಾರ್ಗ, ಕಣ್ಣೂರು/ ಕಾರವಾರ- ಕೆಎಸ್​ಆರ್ ಬೆಂಗಳೂರು ಎಕ್ಸ್​ಪ್ರೆಸ್ , ಕಣ್ಣೂರು/ ಕಾರವಾರ- ಕೆಎಸ್​ಆರ್ ಬೆಂಗಳೂರು- ಮೈಸೂರು ಮಾರ್ಗ
ಆ.12ರಂದು ದೆಹಲಿಯಿಂದ-ಯಶವಂತಪುರಕ್ಕೆ ಬರಬೇಕಿದ್ದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಯಶವಂತಪುರದಿಂದ-ಜೈಪುರ ಮಾರ್ಗ, ಲೋಕಮಾನ್ಯ ತಿಲಕ್ ಟರ್ವಿುನ್ಸ್-ಹುಬ್ಬಳ್ಳಿ ಎಕ್ಸ್​ಪ್ರೆಸ್ ರೈಲು ಸೇವೆ ರದ್ದು
ಸಾರಿಗೆ-ಸಂಪರ್ಕ ಸ್ಥಗಿತ

ಚಾರ್ಮಾಡಿ , ಮಡಿಕೇರಿ, ಸಕಲೇಶಪುರ ಹೆದ್ದಾರಿ ಬಂದ್. ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಡಿತ ಬಾಗಲಕೋಟೆ -ಹುಬ್ಬಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್. ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ. ಜಮಖಂಡಿ-ಮಿರಜ್​ಗೆ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ಬಂದ್
ಚೊಳಚಗುಡ್ಡ ಸೇತುವೆ ಜಲಾವೃತದಿಂದ ಬಾದಾಮಿ-ಗದಗ ಸಂಪರ್ಕ ಕಡಿತ
ರಾಮದುರ್ಗ, ಸವದತ್ತಿ ಬಳಿ ಸೇತುವೆಗಳ ಜಲಾವೃತದಿಂದ ಬಾದಾಮಿ-ಬೆಳಗಾವಿ ಸಂಪರ್ಕ ಬಂದ್
ಹಾಸನದ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲೆ ಬಳಿ ಭೂ ಕುಸಿತ. ಸಂಚಾರ ನಿಷೇಧ
ವಿರಾಜಪೇಟೆ-ಮಾಕುಟ್ಟ ಸಂಪರ್ಕ ರಾಜ್ಯ ಹೆದ್ದಾರಿ ಬಂದ್
ಭಾಗಮಂಡಲ-ತಲಕಾವೇರಿ, ಮೂರ್ನಾಡು-ವಿರಾಜಪೇಟೆ ರಾಜ್ಯ ಹೆದ್ದಾರಿಗಳು ಜಲಾವೃತ ಸುರಪುರ ತಾಲೂಕಿನ ದೇವಾಪುರ ರಾಜ್ಯ ಹೆದ್ದಾರಿಯಲ್ಲಿ ನೀರು ಬಂದಿದ್ದರಿಂದ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯೆ ರಸ್ತೆ ಸಂಪರ್ಕ ಕಡಿತ ಸಂಚಾರ ಸ್ಥಗಿತ
ಮೂರು ದಂಟಿಗೆ 10 ರೂ.

ಒಂದು ವಾರದಿಂದ ತಾಲೂಕಿನಲ್ಲಿ ಕೃಷ್ಣಾ ಪ್ರವಾಹ ಉಂಟಾಗಿ ನದಿ ತೀರದ ಗ್ರಾಮಗಳು ಸ್ಥಳಾಂತರಗೊಂಡಿರುವ ಹಿನ್ನೆಲೆ ದನಕರುಗಳ ಮೇವಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಹಿಂದಿನವಾರ ಪ್ರತಿ 10 ಮೆಕ್ಕೆಜೋಳದ ದಂಟುಗಳಿಗೆ 10 ರೂ. ಇದ್ದದ್ದು, ಈಗ ಮೂರು ದಂಟುಗಳಿಗೆ 10 ರೂ. ಆಗಿದೆ.

ಟೀಕೆಗೆ ಗುರಿಯಾದ ರೇಣುಕಾಚಾರ್ಯ

ದಾವಣಗೆರೆ: ಪ್ರವಾಹದಿಂದ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿ, ಸಂತ್ರಸ್ತರಿಗೆ ನಾಡಿನ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಇಂಥ ಸಂದರ್ಭದಲ್ಲೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಚಾರದ ಗೀಳು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಹೊನ್ನಾಳಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ರೇಣುಕಾಚಾರ್ಯ ಶನಿವಾರ ಬೇಲಿಮಲ್ಲೂರು ಗ್ರಾಮದಲ್ಲಿ ಪ್ರವಾಹಪೀಡಿತ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಅವರು ಮೊಣಕಾಲುದ್ದದಷ್ಟೂ ನೀರಿಲ್ಲದ ಕಡೆ ತೆಪ್ಪದಲ್ಲಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಸಂತ್ರಸ್ತರನ್ನು ಕೂಡಿಸಿಕೊಂಡು ಹುಟ್ಟು ಹಾಕುವಂತೆ ನಾಟಕವಾಡಿದ್ದಾರೆ. ಅಲ್ಲಿ ಜನಪ್ರತಿನಿಧಿಯಾಗಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಿತ್ತು. ಬದಲಾಗಿ ಈ ರೀತಿ ನಟಿಸಿ, ಸಾರ್ವಜನಿಕ ಮೆಚ್ಚುಗೆ ಗಳಿಸಬಹುದು ಎಂದುಕೊಂಡಿದ್ದರೆ ಅದು ಅವರ ಭ್ರಮೆ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿವೆ. ಈ ಪ್ರಸಂಗದ ಬಗ್ಗೆ ‘ಮಾಡರ್ನ್ ಬಾಹುಬಲಿ’ ಎಂದು ಪ್ರತಿಪಕ್ಷದವರು ವ್ಯಂಗ್ಯವಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೃಪೆ:ವಿಜಯವಾಣಿ

ಮುಗಿಯದ ವರುಣನ ಮುನಿಸು
karnataka,heavy rain,flood