ಡಿಸೆಂಬರ್ ಅಂತ್ಯದ ವೇಳೆಗೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಪುನಾರಂಭ- ಸಚಿವ ಡಾ.ನಾರಾಯಣಗೌಡ

 

ಉತ್ತರ ಪ್ರದೇಶ/ ವಾರಣಾಸಿ, ನವೆಂಬರ್,18,2021(www.justkannada.in):  ವಾರಣಾಸಿಗೂ ಕರ್ನಾಟಕ ನಡುವಿನ ರೇಷ್ಮೆ ಬಾಂಧವ್ಯಕ್ಕೆ ಮತ್ತೆ ಮರುಜೀವ ಸಿಕ್ಕಿದೆ  ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ‌.

ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಇಂದು ಉತ್ತರ ಪ್ರದೇಶದ ರೇಷ್ಮೆ ಇಲಾಖೆ, ಟೆಕ್ಸ್‌ ಟೈಲ್ ಇಲಾಖೆ ಅಧಿಕಾರಿಗಳು, ರೀಲರ್ಸ್‌ಗಳ ಜೊತೆ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿದರು.  ಕರ್ನಾಟಕ ರೇಷ್ಮೆ ಗುಣಮಟ್ಟ, ಪೂರೈಕೆ ಹಾಗೂ ರೇಷ್ಮೆ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಕರ್ನಾಟಕದ ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆ ಬೆಳೆಗಾರರಿಗೆ‌  ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಿಸಲು ಕ್ರಮಕೈಗೊಂಡಿರುವ ಕ್ರಮಗಳ  ಬಗ್ಗೆ ಸಚಿವ ಡಾ.ನಾರಾಯಣಗೌಡ ಅವರು ವಿವರಿಸಿದರು.

ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಲಾಗಿದೆ.  ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೆಚ್ಚಿನ ಸ್ವಯಂ ಚಾಲಿತ ರೀಲಿಂಗ್ ಯಂತ್ರ(ಎಂಆರ್‌ಎಂ)ಗಳನ್ನು ಹೊಂದಿದ್ದು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಬೈವೊಲ್ಟಿನ್ ದಾರವನ್ನು ಉತ್ಪಾದಿಸುತ್ತಿದೆ. ಇದು ಚೀನಾ ರೇಷ್ಮೆಗಿಂತಲೂ ಉತ್ತಮವಾಗಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ಕರ್ನಾಟಕದಲ್ಲಿ ಮೈಸೂರು ಸಿಲ್ಕ್ ನಂತೆಯೇ ಉತ್ತರ ಪ್ರದೇಶದ ಬನರಾಸ್ ಸೀರೆ ಪ್ರಸಿದ್ಧಿಯಾಗಿದೆ. ವಾರಣಾಸಿಯ ಬನಾರಸ್‌ ಗೂ ಕರ್ನಾಟಕಕ್ಕೂ ಅವಿನಾವಭಾವ ಸಂಬಂಧವಿದೆ. 1997ರಲ್ಲೇ ಕೆಎಸ್‌ಎಂಬಿ ವತಿಯಿಂದ ವಾರಣಾಸಿಗೆ ಕರ್ನಾಟಕದ ರೇಷ್ಮೆ ಪೂರೈಸಲಾಗುತ್ತಿತ್ತು. ಆದರೆ,  ಕಾರಣಾಂತರಗಳಿಂದ 2003ರಿಂದ ವಾರಣಾಸಿಗೆ ರೇಷ್ಮೆ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ವಾರಣಾಸಿಯಲ್ಲಿ ರೇಷ್ಮೆ ಮಾರುಕಟ್ಟೆ ಆರಂಭಿಸಲು ನಮ್ಮ ಸರ್ಕಾರ ನಿರ್ಧರಿಸಿದೆ‌.   ಬನಾರಸ್ ನೇಕಾರರಿಗೆ ಅಗತ್ಯ ಇರುವ ಗುಣಮಟ್ಟದ ರೇಷ್ಮೆಯನ್ನು ಪೂರೈಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ವಾರಣಾಸಿಯಲ್ಲಿ ನಮ್ಮ ಮಾರುಕಟ್ಟೆ/ ರೇಷ್ಮೆ ಬ್ಯಾಂಕ್ ಸ್ಥಾಪಿಸಲು ವ್ಯವಸ್ಥೆ ಕಲ್ಪಿಸಿ, ಕರ್ನಾಟಕ ಮತ್ತು ವಾರಣಾಸಿ ನಡುವಿನ ಹಳೇ ಸಂಬಂಧ ಮತ್ತೆ ವೃದ್ದಿಸಲು ಸಹಕರಿಸುವಂತೆ ಡಾ.ನಾರಾಯಣಗೌಡ ಅವರು  ಮನವಿ ಮಾಡಿದರು.

ಕರ್ನಾಟಕದ ರೇಷ್ಮೆ ಗುಣಮಟ್ಟಕ್ಕೆ ಉತ್ತರ ಪ್ರದೇಶದ ಅಧಿಕಾರಿಗಳು ಹಾಗೂ ರೀಲರ್ಸ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದ ರೇಷ್ಮೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಈ ಹಿಂದೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ರೇಷ್ಮೆ ಖರೀದಿಸಲಾಗಿದೆ. ವಾರಣಾಸಿಯಲ್ಲಿ ನೇಯ್ಗೆಗೆ ವಿವಿಧ ಏಜೆನ್ಸಿಗಳ ಮೂಲಕ 99% ರೇಷ್ಮೆಯನ್ನು ಕರ್ನಾಟಕದಿಂದಲೇ ಖರೀದಿಸಲಾಗುತ್ತಿದೆ. ನಮಗೆ ಅಗತ್ಯವಿರುವ ಗುಣಮಟ್ಟದ ರೇಷ್ಮೆಯನ್ನು ನೀಡಿದರೇ NHDC ಮುಖಾಂತರ ಕೆಎಸ್‌ಎಂಬಿಯಿಂದಲೇ ಖರೀದಿಸಲು ಕ್ರಮವಹಿಸಲಾಗುವುದು ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಹಾಗೂ ರೀಲರ್ಸ್‌ಗಳು ತಿಳಿಸಿದರು‌‌.

ವಾರಣಾಸಿಯಲ್ಲಿ ಕೆಎಸ್‌ಎಂಬಿ ಬ್ರಾಂಚ್ ಆರಂಭಿಸಲು‌ ಹಾಗೂ ಗೋದಾಮಿಗೆ ಅಗತ್ಯವಿರುವ ಜಾಗವನ್ನು ಒದಗಿಸಲಾಗುವುದು ಎಂದು ಉತ್ತರ ಪ್ರದೇಶ ರೇಷ್ಮೆ ಇಲಾಖೆ ಕಾರ್ಯದರ್ಶಿ ನರೇಂದ್ರ ಸಿಂಗ್ ಪಟೇಲ್ ಭರವಸೆ ನೀಡಿದರು.

ಕರ್ನಾಟಕದಿಂದ ಬರುತ್ತಿದ್ದ ರೇಷ್ಮೆಗೆ ಹಿಂದೆ ವಾರಣಾಸಿಯಲ್ಲಿ ಗ್ರಾಹಕರಿದ್ದರು. ಆದರೆ, ಮಧ್ಯೆದಲ್ಲಿ ರೇಷ್ಮೆ ಸರಬರಾಜು ಸ್ಥಗಿತಗೊಂಡಿದ್ದರಿಂದ ಬನರಾಸ್ ನೇಕಾರರು ಬೇರೆ ಏಜೆನ್ಸಿಗಳ ಕಡೆ ಮುಖ ಮಾಡಿದ್ದಾರೆ. ಹಾಗಾಗಿ, ಮತ್ತೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾರುಕಟ್ಟೆಯನ್ನು ಪುನರ್ ಸ್ಥಾಪಿಸಿ,  ಗುಣಮಟ್ಟದ ರೇಷ್ಮೆ ನೀಡುವ ಮೂಲಕ ಗ್ರಾಹಕರನ್ನ ಸೆಳೆಯಬೇಕಾಗುತ್ತದೆ. ಜೊತೆಗೆ ಚಿಲ್ಲರೆ ಮಾರಾಟಕ್ಕೂ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಹಾಗೂ ನೇಕಾರ ಸಂಘದ ಪದಾಧಿಕಾರಿಗಳು ಸಲಹೆ ನೀಡಿದರು.

ಇದೆ ವೇಳೆ ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಸಿದ್ದಪಡಿಸಿದ್ದ ವರದಿಯನ್ನು ಸಲ್ಲಿಸಲಾಯಿತು.

ಕರ್ನಾಟಕದಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನ, ಎಆರ್‌ಎಂ ಯಂತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.  ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆ  ಉತ್ತರ ಪ್ರದೇಶದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪ್ರದರ್ಶಿಸಲಾಯಿತು.  ಕರ್ನಾಟಕದಿಂದ ಎಲ್ಲಾ ರೀತಿಯ ತಂತ್ರಜ್ಞಾನದ ನೆರವನ್ನು ನೀಡಲಾಗುವುದು. ಇದು ಉತ್ತರ ಪ್ರದೇಶ ಹಾಗೂ ಕರ್ನಾಟಕ ನಡುವಿನ ಸಂಬಂಧ ವೃದ್ಧಿಸಲು ಮತ್ತಷ್ಟು ಸಹಕಾರಿ ಆಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ಪ್ರಧಾನಿ ಮೋದಿ ಕನಸಿನಂತೆ ರೈತರ ಆದಾಯ ದ್ವಿಗುಣಕ್ಕೆ ಬದ್ಧ: ಸಚಿವ ಡಾ ನಾರಾಯಣಗೌಡ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ರೈತರ ಆದಾಯ ದ್ವಿಗುಣ ಆಗಬೇಕು. ಆ ನಿಟ್ಟಿನಲ್ಲಿ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ರೇಷ್ಮೆ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ‌. ದೇಶದಲ್ಲೇ ‌48% ರೇಷ್ಮೆಯನ್ನು ಕರ್ನಾಟಕದಲ್ಲಿ ಬೆಳೆಯುತ್ತಿದ್ದು, ಕರ್ನಾಟಕದ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ವಾರಣಾಸಿಯಲ್ಲಿ ನಮ್ಮ ರೇಷ್ಮೆ ಮಾರುಕಟ್ಟೆಯನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದು, ಅದರ ಭಾಗವಾಗಿ ಇವತ್ತು ಸಭೆ ನಡೆಸಲಾಯಿತು. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ವಾರಣಾಸಿಯಲ್ಲಿ ರೇಷ್ಮೆ ಮಾರಾಟ ಪ್ರಕ್ರಿಯೆ ಆರಂಭಿಸಲಾಗುವುದು. ಇದರಿಂದ ರೇಷ್ಮೆಗೆ ಬೇಡಿಕೆ ಹೆಚ್ಚಲಿದ್ದು, ನಮ್ಮ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಭೆಯಲ್ಲಿ  ಕೆಎಸ್‌ಎಂಬಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಕೆಎಸ್‌ಎಂಬಿ ಎಂಡಿ ಅನುರಾಧ, ಉತ್ತರ ಪ್ರದೇಶ ಸರ್ಕಾರದ ರೇಷ್ಮೆ ಇಲಾಖೆ ನರೇಂದ್ರ ಸಿಂಗ್ ಪಟೇಲ್, IIHT ನಿರ್ದೇಶಕ ಥೆನ್ನಾ ರೆಶ್ಯೂ, ವಾರಣಾಸಿ ಡಿಸಿ(ಕೈಗಾರಿಕೆ)- ವೀರೇಂದ್ರ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Key words: Karnataka- silk market – restart – Varanasi  -minister- Dr Narayana Gowda