ನ.1 ರಂದು ನಟ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ  ಭಾಗಿಯಾಗಲಿದ್ದಾರೆ ನಟ ಜೂ. ಎನ್​ಟಿಆರ್ ಮತ್ತು ರಜನಿಕಾಂತ್​.

ಬೆಂಗಳೂರು,ಅಕ್ಟೋಬರ್,29,2022(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ  ತೆಲುಗು ಚಿತ್ರರಂಗದ ಸ್ಟಾರ್​ ನಟ ಜೂನಿಯರ್​ ಎನ್​ಟಿಆರ್​  ಹಾಗೂ ಹಿರಿಯ ನಟ ರಜನಿಕಾಂತ್ ಅವರಿಗೆ ಕರ್ನಾಟಕ ಸರ್ಕಾರದಿಂದ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ.

ಪುನೀತ್​ ರಾಜ್​ಕುಮಾರ್​ ಪರವಾಗಿ ಅವರ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಸಾಕ್ಷಿ ಆಗಲಿದ್ದಾರೆ.

ಪುನೀತ್​ ರಾಜ್ ಕುಮಾರ್ ನಿಧನರಾಗಿ ಇಂದಿಗೆ (ಅ.29) ಒಂದು ವರ್ಷ ಕಳೆದಿದೆ. ಕುಟುಂಬದವರು ಅವರ ಪುಣ್ಯ ಸ್ಮರಣೆ ಸಲುವಾಗಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.

Key words: Karnataka Ratna award – actor –Punith rajkumar- Nov. 1