ಕರ್ನಾಟಕ ಪೊಲೀಸ್‍ ಅಕಾಡೆಮಿ, ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥ ನಡುವೆ ಒಡಂಬಡಿಕೆಗೆ ಸಹಿ

ಮೈಸೂರು,ಡಿಸೆಂಬರ್,8,2025 (www.justkannada.in): ಕರ್ನಾಟಕ ಪೊಲೀಸ್‍ ಅಕಾಡೆಮಿ ಮತ್ತು ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತುಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್ ಗಳನ್ನು ಅಭಿವೃದ್ದಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ  ಪೊಲೀಸ್ ಅಕಾಡೆಮಿಯ ನಿರ್ದೇಶಕ ಚೆನ್ನಬಸವಣ್ಣಎಸ್‍ಎಲ್. ಅವರು, ‘ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್‍ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದ್ದು, ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್‍ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿಗಳಿಗೆ ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ. ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಾವಾದ ವ್ಯಕ್ತಪಡಿಸಿದರು.

ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿಜೆ ಫಿಲಿಪ್ಸ್‍ ಅವರು,  ‘ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ಪೊಲೀಸ್‍ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್‍ ಇಲಾಖೆಯೊಂದಿಗೆ ಕೈ ಜೋಡಿಸುವುದು ಈ ಒಡಂಬಡಿಕೆಯ ಉದ್ದೇಶ. ಈ ಒಂದು ನಿಟ್ಟಿನಲ್ಲಿ ರಾಜ್ಯ ಪೊಲೀಸ್‍ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್‍ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣಅವರು ಹಾಗೂ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ  ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್‍ ಅಕಾಡೆಮಿಯ ಅಧಿಕಾರಿ ವರ್ಗ ಹಾಗೂ ಬೋಧಕರು ಹಾಜರಿದ್ದರು.

Key words: Karnataka Police Academy, Savitribai Phule, Women and Child Development, Institute