ಬೆಂಗಳೂರು, ಅಕ್ಟೋಬರ್, 30,2026 (www.justkannada.in) : ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿಧಿ, ಪ್ರಶಸ್ತಿಗಳನ್ನು ಸ್ಥಾಪಿಸಿವೆ.
ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಅಭಿಮಾನಿ ಪ್ರಶಸ್ತಿ”, ಮೈಸೂರಿನ “ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ‘ಮಾನವೀಯ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ಅಂಕಣ/ಸಂಪಾದಕೀಯ/ಪರಿಣಾಮಕಾರಿ ವರದಿಗೆ “ಅಭಿಮನ್ಯು ಪ್ರಶಸ್ತಿ”, ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ “ಪ್ರಜಾಸಂದೇಶ ದತ್ತಿ ಪ್ರಶಸ್ತಿ”, ಹಾಗೂ ಹಿರಿಯ ಪತ್ರಕರ್ತರ ಹೆಸರಿನ ಸ್ಥಾಪಿಸಲಾದ ಕೃಷಿವಲಯದಲ್ಲಿ ಅತ್ಯುತ್ತಮ ವರದಿ/ಅಂಕಣ/ಲೇಖನ “ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ” ಗಳನ್ನು ಸ್ಥಾಪಿಸಿವೆ. ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ ನಗದು ಬಹುಮಾನ ಒಳಗೊಂಡಿವೆ.
ಈ ಪ್ರಶಸ್ತಿಗಳಿಗೆ ಆಸಕ್ತ ಪತ್ರಕರ್ತರು 01-01-2026 ರಿಂದ 30-10-2026ರ ವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ-ವರದಿಯನ್ನು ಕಳುಹಿಸಬಹುದು.
ಕನ್ನಡ ದೈನಿಕ-ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
ಲೇಖನ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ‘ಅಭಿಮಾನಿ ಪ್ರಶಸ್ತಿ-2026’, ‘ಮೈಸೂರು ದಿಗಂತ ಪ್ರಶಸ್ತಿ-2026’, “ಅಭಿಮನ್ಯು ಪ್ರಶಸ್ತಿ-2026* “ಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2026” ಹಾಗೂ “ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ-2026” ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಇದೇ 21-11-2026ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಪ್ರಶಸ್ತಿಗಳ ಆಯ್ಕೆ ಸಂಬಂಧ ಅಕಾಡೆಮಿಯು ಕೈಗೊಳ್ಳುವಾ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






