ಕೆಲಸ ಸಿಕ್ಕಿದ ನಂತರ ಕುಳ್ಳಗಾದ ಅರಣ್ಯಾಧಿಕಾರಿಗಳು!

ಬೆಂಗಳೂರು:ಜೂ-24: ಉಪವಲಯ ಅರಣ್ಯ ಅಧಿಕಾರಿ ನೇಮಕದಲ್ಲಿ ಹೇರಾಪೇರಿ ನಡೆದಿರುವುದು ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಯ ಇನ್ನಿತರ ನೇಮಕದ ಮೇಲೆ ಅನುಮಾನ ಆರಂಭವಾಗಿದೆ.

ಎರಡು ವರ್ಷದ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲಸಗಿಟ್ಟಿಸಿಕೊಂಡು ನೇಮಕಾತಿ ಆದೇಶವನ್ನೂ ಪಡೆದುಕೊಂಡು ಇನ್ನೇನು ತರಬೇತಿ ಆರಂಭಿಸಬೇಕೆಂಬ ಹೊತ್ತಿನಲ್ಲಿ ಕೆಲವು ಅಭ್ಯರ್ಥಿಗಳು ಅರ್ಹತೆಯನ್ನೇ ಹೊಂದಿಲ್ಲ ಎಂಬುದು ಬಯಲಾಗಿದೆ. ಮೇಲ್ನೋಟಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಶಿಫಾರಸು, ಹಣದ ಹರಿದಾಟ ನಡೆದಿರುವ ಶಂಕೆ ವ್ಯಕ್ತವಾಗಿದೆ.

2017-18ನೇ ಸಾಲಿನಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿತ್ತು. ಆರು ತಿಂಗಳ ಹಿಂದೆ ಆಯ್ಕೆ ಅಂತಿಮಗೊಂಡಿತ್ತು. ಹುದ್ದೆ ಇಲ್ಲದ ಕಾರಣ ನೇಮಕ ಆದೇಶ ಕೊಟ್ಟಿರಲಿಲ್ಲ. ಇದೀಗ 329 ಅಭ್ಯರ್ಥಿಗಳನ್ನು ತರಬೇತಿಗೆ ನಿಯೋಜಿಸಲಾಗಿತ್ತು. ಆದರೆ ಧಾರವಾಡದ ಗುಂಗರಗಟ್ಟಿ ಅರಣ್ಯ ಅಕಾಡೆಮಿಯಲ್ಲಿ ನಾಲ್ವರು ಅಭ್ಯರ್ಥಿಗಳು ಸರ್ಕಾರದ ನಿಯಮದ ಪ್ರಕಾರ ಅರ್ಹತೆಯನ್ನೇ ಹೊಂದಿಲ್ಲದ್ದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಪುರುಷ ಅಭ್ಯರ್ಥಿಗೆ 163 ಸೆ.ಮೀ. ಎತ್ತರ ಹಾಗೂ ಮಹಿಳಾ ಅಭ್ಯರ್ಥಿಗೆ 150 ಸೆ.ಮೀ. ಎತ್ತರ ನಿಗದಿ ಪಡಿಸಲಾಗಿತ್ತು. ತರಬೇತಿಗೆ ಬಂದ ಕೆಲವರ ಎತ್ತರದ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹಾಜರಾತಿ ಸಲ್ಲಿಸುವ ವೇಳೆ ಅವರ ಎತ್ತರದ ಬಗ್ಗೆ ಸಂಶಯಗೊಂಡು ಪರಿಶೀಲಿಸಿದಾಗ ಕೆಲವು ಅಭ್ಯರ್ಥಿಗಳು ನಿಗದಿಪಡಿಸಿದ ಎತ್ತರಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ. ಪ್ರಮುಖವಾಗಿ ಎತ್ತರದ ಅರ್ಹತೆಯನ್ನೇ ಹೊಂದಿರದ ನಾಲ್ವರನ್ನು ಜೂನ್ 21ರಂದು ಕಾರ್ಯ ವಿಮುಕ್ತಿಗೊಳಿಸಿ ಪ್ರಧಾನ ಕಚೇರಿಗೆ ಕಳುಹಿಸಿಕೊಡಲಾಗಿದೆ.

ತರಬೇತಿಗೆ ಬಂದವರಲ್ಲಿ ಕೆಲವರು ನಿಗದಿತ ಅರ್ಹತೆ ಪಡೆದಿಲ್ಲ ಎಂದು ತರಬೇತಿ ಕೇಂದ್ರದಿಂದ ವರದಿ ಬಂದಿದೆ. ಎಷ್ಟು ಅರ್ಹತೆ ಇರಬೇಕಿತ್ತೋ ಅಷ್ಟು ಇಲ್ಲ ಎಂದು ವರದಿಯಲ್ಲಿದೆ. ಮಂಗಳವಾರ ಅವರನ್ನು ಬರ ಹೇಳಿದ್ದೇವೆ. ವಿಚಾರಣೆ ಮಾಡುತ್ತೇವೆ.

| ರಾಜೀವ್ ರಂಜನ್ (ಐಎಫ್​ಎಸ್), ನೇಮಕ ವಿಭಾಗದ ಮುಖ್ಯಸ್ಥ, ಅರಣ್ಯ ಇಲಾಖೆ

ಗಾರ್ಡ್ ನೇಮಕ ಪ್ರಕ್ರಿಯೆ ಬಗ್ಗೆಯೂ ಸಂಶಯ

ಒಂದು ಕೇಂದ್ರದಿಂದ ಅನರ್ಹರ ಬಗ್ಗೆ ವರದಿ ಬಂದಿದೆ. ವರದಿ ಮಾಡಿದವರೂ ಹಿರಿಯ ದಕ್ಷ ಅಧಿಕಾರಿಗಳೇ. ಹೀಗಾಗಿ ಅರಣ್ಯ ಇಲಾಖೆಯ ಇಲವಾಲ, ಚಕ್ರ, ಕುಶಾಲನಗರ ಸೇರಿ 5 ಕಡೆ ತರಬೇತಿ ಪಡೆಯುತ್ತಿರುವವರ ಅರ್ಹತೆ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ಇನ್ನೂ ಮುಖ್ಯವಾಗಿ, ಗಾರ್ಡ್ ನೇಮಕ ಪ್ರಕ್ರಿಯೆ ನಡೆದಿದ್ದು, ಅಲ್ಲೂ ಅನರ್ಹರಿಗೆ ಮಣೆ ಹಾಕಲಾಗಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.

ಅರ್ಹತೆ ಪ್ರಕ್ರಿಯೆ

ಅರಣ್ಯ ಇಲಾಖೆಯ ಪ್ರಮುಖ ಹುದ್ದೆಗಳಾದ ಗಾರ್ಡ್, ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಬಿಗಿಯಾಗಿರುತ್ತದೆ. 24 ಕಿ.ಮೀ. ನಡಿಗೆ (ಮಹಿಳೆಯರಿಗೆ 16 ಕಿ.ಮೀ.)ಯಲ್ಲಿ ಅರ್ಹರಾದವರಿಗೆ ಎತ್ತರ ಮತ್ತು ಎದೆ ಸುತ್ತಳತೆ ಪರೀಕ್ಷೆ ನಡೆಸಲಾಗುತ್ತದೆ. ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಆಯ್ಕೆ ಪ್ರಕ್ರಿಯಂತೆ ಕಠಿಣ ಪ್ರಕ್ರಿಯೆ ನಡೆಯುವುದು. ಈ ಹಂತದ ಬಳಿಕವಷ್ಟೇ ಲಿಖಿತ ಪರೀಕ್ಷೆ, ಅಲ್ಲಿ ಮೆರಿಟ್ ಮೇಲೆ ಆಯ್ಕೆಯಾದವರಿಗೆ ಆರೋಗ್ಯ ಪರೀಕ್ಷೆ ನಡೆಯುವುದು. ಇಷ್ಟೆಲ್ಲ ನಡೆಯುವಾಗ ಅನರ್ಹರು ನುಸುಳಿದ್ದು ಹೇಗೆ ಎಂಬುದೇ ಪ್ರಶ್ನೆ.
ಕೃಪೆ;ವಿಜಯವಾಣಿ

ಕೆಲಸ ಸಿಕ್ಕಿದ ನಂತರ ಕುಳ್ಳಗಾದ ಅರಣ್ಯಾಧಿಕಾರಿಗಳು!
karnataka-forest-department-training-4-officers-from-job