ಕಡ್ಡಾಯ ವರ್ಗಾವಣೆ ರದ್ದು ಪಡಿಸುವಂತೆ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ ಶಿಕ್ಷಕರು.

 

ಬೆಂಗಳೂರು, ಜು.30, 2019 : (www.justkannada.in news) : ಶಿಕ್ಷಕರ ಕಡ್ಡಾಯ ವರ್ಗಾವಣೆ ಪದ್ಧತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಶಿಕ್ಷಕರ ಪ್ರತಿನಿಧಿಗಳು ಮನವಿ ಸಲ್ಲಿಸಿದರು.

ಬೆಳಗಾವಿ, ಹುಬ್ಬಳಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರು, ಸಿಎಂ ಯಡಿಯೂರಪ್ಪ ಅವರ ನಿವಾಸದ ಬಳಿ ಇಂದು ಬೆಳಗ್ಗೆ ಸೇರಿ ಕಡ್ಡಾಯ ವರ್ಗಾವಣೆಯಲ್ಲಿನ ಅವೈಜ್ಞಾನಿಕ ಅಂಶಗಳ ಬಗ್ಗೆ ದೂರು ನೀಡಿ, ಈ ಪದ್ಧತಿ ಕೈಬಿಟ್ಟು ಕಡ್ಡಾಯ ವರ್ಗಾವಣೆ ರದ್ದುಪಡಿಸಬೇಕು ಎಂದು ವಿನಂತಿಸಿಕೊಂಡರು.
ಕಡ್ಡಾಯ ವರ್ಗಾವಣೆಗೆ ಪರ್ಯಾಯವಾಗಿ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆಯನ್ನು ಜಾರಿಗೆ ತರುವಂತೆ ಶಿಕ್ಷಕರು ಒತ್ತಾಯಿಸಿದರು.

ಆಕ್ಷೇಪ :

ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕಡ್ಡಾಯ ವರ್ಗಾವಣೆ ಜಾರಿಗೆ ತರಲಾಯಿತು. ಆದರೆ ನಂತರ ಕೆಲವರ ಒತ್ತಡಕ್ಕೆ ಮಣಿದು, ಪತಿ-ಪತ್ನಿ ಪ್ರಕರಣದಡಿ ವಿನಾಯಿತಿ ನೀಡಲು ತೀರ್ಮಾನಿಸಲಾಯಿತು. ಇದು ಕಡ್ಡಾಯ ವರ್ಗಾವಣೆಯ ನೀತಿಗೆ ವಿರುದ್ಧವಾದದ್ದು ಎಂಬುದು ಶಿಕ್ಷಕರ ಆಕ್ಷೇಪ. ಈ ಅಂಶವನ್ನೇ ಮುಂದಿಟ್ಟುಕೊಂಡು ಕಡ್ಡಾಯ ವರ್ಗಾವಣೆಯ ಪಟ್ಟಿಯಲ್ಲಿದ್ದ ಶೇ.40ಕ್ಕೂ ಹೆಚ್ಚು ಶಿಕ್ಷಕರ ಹೆಸರನ್ನು ಕೈ ಬಿಡಲಾಗಿದೆ. ಇದು ನ್ಯಾಯ ಸಮ್ಮತವಲ್ಲ. ಕಾರಣ ಈ ಅಂಶವನ್ನೇ ಮುಂದಿಟ್ಟುಕೊಂಡು ನಿವೃತ್ತಿಯಾಗುವ ತನಕ ಅವರು ಒಂದೇ ಕಡೆ ಕೆಲಸ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶಿಕ್ಷಕರ ವಾದ.

ಆಶ್ವಾಸನೆ :

ಕಡ್ಡಾಯ ವರ್ಗಾವಣೆಯಲ್ಲಿನ ಲೋಪದೋಷಗಳ ಬಗ್ಗೆ ಶಿಕ್ಷಕರ ಮನವಿ ಆಲಿಸಿದ ಸಿಎಂ ಯಡಿಯೂರಪ್ಪ, ಮನವಿ ಪರಿಶೀಲಿಸಿ ಕಡ್ಡಾಯ ವರ್ಗಾವಣೆ ರದ್ದು ಪಡಿಸುವ ಭರವಸೆ ನೀಡಿದರು ಎನ್ನಲಾಗಿದೆ.

—-
key words : karnataka-cm-b.s.yadiyurappa-teachers-compulsery-transfer-cancel