Wednesday, August 12, 2026

BDA Apartments

Home Front Page ಶ್ರಾವಣ ಮಾಸದ ಕೊನೆ ವಾರ ರಾಜ್ಯದಿಂದ ಕಾಶಿಗೆ ‘ ಭಾರತ್‌ ಗೌರವ್‌’ ರೈಲು: ಸಚಿವೆ...

ಶ್ರಾವಣ ಮಾಸದ ಕೊನೆ ವಾರ ರಾಜ್ಯದಿಂದ ಕಾಶಿಗೆ ‘ ಭಾರತ್‌ ಗೌರವ್‌’ ರೈಲು: ಸಚಿವೆ ಶಶಿಕಲಾ ಜೊಲ್ಲೆ

Karnataka-Bangalore-train-Bharat-gourav-kashi-tour-package

file photo

 

ಬೆಂಗಳೂರು ಜುಲೈ 11, 2022: (www.justkannada.in news) ಶ್ರಾವಣ ಮಾಸದ ಕೊನೆಯ ವಾರದಲ್ಲಿ ರಾಜ್ಯದಿಂದ ಕಾಶಿ ಯಾತ್ರೆಗೆ ಭಾರತ್‌ ಗೌರವ್‌ ರೈಲು ಯೋಜನೆ ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಇಂದು ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್‌ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶಿಲನೆ ಹಾಗೂ ರೈಲ್ವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುವ ಭಾರತ್‌ ಗೌರವ್‌ ರೈಲು, ಶ್ರಾವಣ ಮಾಸದ ಕೊನೆಯ ವಾರದಲ್ಲಿ ಸಂಚರಿಸಲಿದೆ. ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಪ್ಯಾಕೇಜುಗಳನ್ನು ಮುಜರಾಯಿ ಇಲಾಖೆ ಸಿದ್ಧಪಡಿಸಲಿದೆ.

ಭಾರತ್‌ ಗೌರವ್‌ ರೈಲು ಯೋಜನೆಯಡಿ ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ರೈಲನ್ನು ಮಾರ್ಪಾಡಿಸುವ ಹಾಗೂ ಇನ್ನಿತರೆ ಅಗತ್ಯ ಕ್ರಮಗಳ ಬಗ್ಗೆ ವಿಸ್ತ್ರುತವಾಗಿ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ರಿಯಾಯಿತಿ ದರದಲ್ಲಿ 7 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ 1 ಕೋಟಿ ರೂ. ಭೌತಿಕ ಬ್ಯಾಂಕ್‌ ಗ್ಯಾರಂಟಿ ನೀಡಿ ರೈಲನ್ನು ಬಾಡಿಗೆಗೆ ಪಡೆಯಲಾಗಿದೆ ಎಂದರು.

ರೈಲಿನ ವಿನ್ಯಾಸ :

ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್‌-ಬೆಂಗಳೂರು ಮಾರ್ಗದಲ್ಲಿ ರೈಲು 7 ದಿನಗಳಲಿ 4161 ಕಿಲೋಮೀಟರ್‌ಗಳಷ್ಟು ದಾರಿ ಕ್ರಮಿಸಲಿದೆ. 14 ಬೋಗಿಗಳನ್ನು ಈ ರೈಲು ಒಳಗೊಂಡಿರಲಿದ್ದು, 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಅಣಿ ಮಾಡಲಾಗುತ್ತಿದೆ. 3 ಟಯರ್‌ ಎಸಿಯ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು. ಅಲ್ಲದೇ, ನಮ್ಮ ರಾಜ್ಯದ ಪ್ರಮುಖ ದೇವಸ್ಥಾನಗಳ ಬ್ರಾಂಡಿಂಗ್‌ ಮಾಡುವ ಉದ್ದೇಶದಿಂದ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ 11 ದೇವಸ್ಥಾನಗಳ ಮಾಹಿತಿಯನ್ನು ಅಳವಡಿಸಲಾಗುವುದು. ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೇಯ ಅಧೀನ ಸಂಸ್ಥೆಯ ಜೊತೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು ಎಂದು ಸಚಿವೆ ತಿಳಿಸಿದರು.

ಈ ಸಂಧರ್ಭದಲ್ಲಿ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ಸೌತ್‌ ವೆಸ್ಟರ್ನ್‌ ರೈಲ್ವೇಯ ಚೀಫ್ ಕಮರ್ಷಿಯಲ್‌ ಮ್ಯಾನೇಜರ್‌ ಡಾ ಅನೂಪ್‌ ದಯಾನಂದ್‌ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

key words : Karnataka-Bangalore-train-Bharat-gourav-kashi-tour-package