ನಾಳೆ ಕರ್ನಾಟಕ ಬಂದ್:  ಶಾಲಾ –ಕಾಲೇಜುಗಳಿಗೆ ರಜೆ ಇಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ…

ಬೆಂಗಳೂರು,ಫೆ,12,2020(www.justkannada.in):  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನಾಳೆ  ಬಂದ್ ಗೆ ಕರೆನೀಡಿದ್ದು ಈ ನಡುವೆ ನಾಳೆ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ನಾಳೆ ಬಂದ್ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಎಂದಿನಂತೆ ಶಾಲಾಕಾಲೇಜುಗಳು ನಡೆಯಲಿವೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ನಾಳಿನ ಬಂದ್ ಗೆ ಕೆಎಸ್ ಆರ್ ಟಿಸಿ ಬಿಎಂಟಿಸಿ ನೈತಿಕ ಬೆಂಬಲ ನೀಡಿದ್ದು ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲ. ಓಲಾ ಊಬರ್ ಟ್ಯಾಕ್ಸಿ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದು ಇವು ನಾಳೆ ರಸ್ತೆಗಿಳಿಯಲ್ಲ. ಹಾಲು, ಮೊಸರು ಉತ್ಪನ್ನಗಳ ಮಾರಾಟ ಸಂಸ್ಥೆಗಳು, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಸಿನಿಮಾ ಮಂದಿರಗಳು, ಮಾರುಕಟ್ಟೆಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಎಂದು ಹೇಳಲಾಗುತ್ತಿದೆ.

Key words: Karnataka bandh –no leave- school and college- Education Minister -Suresh Kumar