7ನೇ  ವೇತನ ಆಯೋಗದ ವರದಿ ಸ್ವೀಕಾರಕ್ಕೆ JUST 20 ಗಂಟೆ ಮಾತ್ರ ಬಾಕಿ..!

ಬೆಂಗಳೂರು, ಮಾ.೧೫, ೨೦೨೪ :  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರಕ್ಕೆ ಉಳಿದಿರುವುದು ಕೇವಲ  ೨೦ ಗಂಟೆಗಳು ಮಾತ್ರ.

ಇಂದು ಆಯೋಗದ ಅವಧಿ ಮುಗಿಯುತ್ತಿದೆ. ನಾಳೆ ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ. ಅಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆಗಳಿವೆ.  ಈ ಹಿನ್ನೆಲೆಯಲ್ಲಿ ನಾಳೆ ಮದ್ಯಾಹ್ನದೊಳಗೆ ರಾಜ್ಯ ಸರಕಾರ ಈ ವರದಿ ಸ್ವೀಕರಿಸಬೇಕು. ಇಲ್ಲವೇ ಆಯೋಗದ ಅವಧಿ ವಿಸ್ತರಿಸಬೇಕಿದೆ.

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗ ಸರ್ಕಾರ ಯಾವುದೇ ಹೊಸ ಯೋಜನೆ ಅಥವಾ ನಿರ್ಧಾರ ಕೈಗೊಳ್ಳುವಂತಿಲ್ಲ. ಹೀಗಾಗಿ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ತುದಿಗಾಲಿನಲ್ಲಿ ನಿಂತು ರಾಜ್ಯ ಸರಕಾರದ ನಿರ್ಧಾರವನ್ನು ಎದುರು ನೋಡುತ್ತಿದ್ದಾರೆ.

ಎರಡು ಬಾರಿ ಅವಧಿ ವಿಸ್ತರಣೆ:

ಸುಧಾಕರ್ ರಾವ್ ನೇತೃತ್ವದಲ್ಲಿ ರಾಜ್ಯಸರ್ಕಾರ 2022 ರ ನವೆಂಬರ್ 19 ರಂದು ಆಯೋಗವನ್ನು ರಚಿಸಿ ಆರು ತಿಂಗಳಲ್ಲಿ ವರದಿ ನೀಡುವ ಗಡುವು ನೀಡಿತ್ತು. ಆನಂತರ 2023 ರ ಮೇ 15 ರಂದು ಮತ್ತೆ ಆರು ತಿಂಗಳ ಅವಧಿಗೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ 2023 ರ ನವೆಂಬರ್ 6 ರಂದು ಆಯೋಗದ ಅವಧಿಯನ್ನು ಇಂದಿನವರೆಗೆ ವಿಸ್ತರಿಸಿ ಆದೇಶಿಸಲಾಗಿತ್ತು.

ಶೇ. ೩೦ ರಷ್ಟು ಹೆಚ್ಚಳ :

ಸಿದ್ಧಪಡಿಸಲಾಗಿರುವ ಆಯೋಗದ ವರದಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳವನ್ನು ಹಿಂದಿನ ಸರ್ಕಾರವೇ ಜಾರಿ ಮಾಡಿದೆ.

ಚುನಾವಣಾ ಪ್ರಣಾಳಿಕೆಯಲ್ಲಿಯೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿತ್ತು.  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಂಚಖಾತ್ರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಗಮನ ಹರಿಸುತ್ತಿಲ್ಲ ಎಂಬುದು  ಆರೋಪ .

KEY WORDS : Karnataka – 7th pay commission – report – government – employees