ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯರಿಂದ ಶುಭಾಶಯ

ಬೆಂಗಳೂರು,ನವೆಂಬರ್,1,2025 (www.justkannada.in):  ನಾಡಿನೆಲ್ಲಡೆ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಕನ್ನಡದಲ್ಲಿಯೇ ಶುಭಕೋರಿದ್ದಾರೆ.

ಹಾಗೆಯೇ  ಸಿಎಂ  ಸಿದ್ದರಾಮಯ್ಯ,  ಡಿಸಿಎಂ ಡಿ.ಕೆ. ಶಿವಕುಮಾರ್  ಸಹ ಟ್ವೀಟ್ ಮಾಡಿ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕನ್ನಡ ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ- ಸಿಎಂ ಸಿದ್ದರಾಮಯ್ಯ

ಹಾಗೆಯೇ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ, ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ.

ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ. ನಾಡಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜೈ ಭುವನೇಶ್ವರಿ, ಜೈ ಕರ್ನಾಟಕ ಎಂದು  ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು. ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ನಿತ್ಯ ಬಳಸಿ, ಅದನ್ನು ಇನ್ನಷ್ಟು ಉತ್ತುಂಗಕ್ಕೇರಿಸುವ ಕಾರ್ಯ ನಮ್ಮೆಲ್ಲರ ಪರಮ ಕರ್ತವ್ಯ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ತಿಳಿಸಿದ್ದಾರೆ.

Key words: Kannada Rajyotsava, PM Modi, CM Siddaramaiah