ನಟಿ ಕಾಜಲ್ ಅಗರ್ ವಾಲ್ ರನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಕಳೆದುಕೊಂಡ ಅಭಿಮಾನಿ

ಚೆನ್ನೈ:ಆ-2:(www.justkannada.in) ನಟ-ನಟಿಯರ ಮೇಲಿನ ಹುಚ್ಚು ಅಭಿಮಾನ ಅದೆಂತಹ ಅವಾಂತರಗಳನ್ನು, ಪೇಚಿಗೆ ಸಿಲುಕುವ ಸ್ಥಿಗೆ ತರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರ ನಟಿ ಕಾಜಲ್ ಅಗರ್ ವಾಲ್ ಅವರನ್ನು ಭೇಟಿಯಾಗಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಗಳನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆಬಂದಿದೆ.

ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರನಾಗಿರುವ ಪ್ರದೀಪ್​ ಕುಮಾರ್(27) ನಟಿ ಕಾಜಲ್ ಅಗರ್ ವಾಲ್ ರ ದೊಡ್ಡ ಅಭಿಮಾನಿ. ಆಕೆಯನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕು ಎಂಬ ಆಸೆಯಿಂದ 75 ಲಕ್ಷ ವಂಚನೆಗೊಳಗಾಗಿದ್ದಾರೆ.

ಕಾಜಲ್ ರನ್ನು ಭೇಟಿಯಾಗಬೇಕೆಂಬ ತನ್ನ ಮನದಾಸೆಯನ್ನು ಪ್ರದೀಪ್ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಅದಕ್ಕೆ ಕೆಲವು ಸ್ನೇಹಿತರು ಸಿನಿಮಾ ತಾರೆಯನ್ನು ಭೇಟಿ ಮಾಡಿಸುವ ವೆಬ್​ಸೈಟ್​ವೊಂದರಲ್ಲಿ ಹೆಸರನ್ನು ರಿಜಿಸ್ಟರ್​ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಆತ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಿದ್ದ.

ರಿಜಿಸ್ಟರ್​ ಮಾಡಿದ 10 ನಿಮಿಷದಲ್ಲೇ ವ್ಯಕ್ತಿಯೊಬ್ಬ ಪ್ರದೀಪ್​ಗೆ ಕರೆ ಮಾಡಿ ಈತನ ಇತ್ತೀಚೆಗಿನ ಕೆಲವು ಫೋಟೋಗಳು ಹಾಗೂ ಐಡಿ ಪ್ರೂಫ್​ ಅನ್ನು ಪಡೆದುಕೊಂಡಿದ್ದ. ನಂತರ ಸರ್ವೀಸ್ ಚಾರ್ಜ್​ ಎಂದು 50 ಸಾವಿರ ನೀಡಬೇಕು ಎಂದು ತಿಳಿಸಿದ್ದ. ಮೊದಲ ಕಂತಿನಲ್ಲಿ 25 ಸಾವಿರ ನೀಡಬೇಕು ಎಂದು ಸೂಚಿಸಿದ್ದ. ಅದರಂತೆ ಪ್ರದೀಪ್​ ಕುಮಾರ್​ ಹಣ ವರ್ಗಾವಣೆ ಮಾಡಿದ್ದ. ಹಣ ಪಡೆದ ನಂತರ ನಟಿಯನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದ. ಆ ನಂತರವೂ ಪ್ರದೀಪ್​ನಿಂದ ಹಲವು ಬಾರಿ ಹಣ ಪಡೆದಿದ್ದ. ಆದರೆ, ನಟಿಯನ್ನು ಭೇಟಿ ಮಾಡಿಸಲೇ ಇಲ್ಲ. ಪ್ರದೀಪ್​ ಉದ್ಯಮಿಯೊಬ್ಬರ ಮಗ ಎಂಬುದು ತಿಳಿಯುತ್ತಿದ್ದಂತೆ. ವಂಚಕರು ಪ್ರದೀಪ್​ ಕಳುಹಿಸಿದ್ದ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಲು ಪ್ರಾರಂಭಿಸಿದರು. ಆ ನಂತರ ಪ್ರದೀಪ್​ ಹಂತ ಹಂತವಾಗಿ 75 ಲಕ್ಷ ರೂ. ಹಣವನ್ನು ವಂಚಕರಿಗೆ ನೀಡಿದ್ದ.

ವಂಚಕರ ಕಾಟ ತಾಳಲಾರದೇ ಪ್ರದೀಪ್​ ಮನೆಬಿಟ್ಟು ಹೋಗಿ ಕೋಲ್ಕತ್ತಾಗೆ ತೆರಳಿ ಅಲ್ಲಿಂದ ತನ್ನ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಗಾಬರಿಯಾದ ಪ್ರತೀಪ್ ತಂದೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರದೀಪ್​ನನ್ನು ಪತ್ತೆ ಹಚ್ಚಿ ವಾಪಸ್​ ಕರೆತಂದಿದ್ದಾರೆ. ಪ್ರದೀಪ್​ನನ್ನು ವಿಚಾರಣೆ ನಡೆಸಿದಾಗ ಆತ ನಟಿ ಕಾಜಲ್ ಅಗರ್ ವಾಲ್ ಭೇಟಿ ಮಾಡಲು ಪ್ರಯತ್ನಿಸಿ ವಂಚನೆಗೊಳಗಾಗಿರುವುದು ತಿಳಿದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೆನ್ನೈನ ಅಶೋಕ್​ ನಗರ ಪ್ರದೇಶದ ಲಾಡ್ಜ್​ವೊಂದರಿಂದ 37 ವರ್ಷದ ಶರವಣಕುಮಾರ್​ ಅಲಿಯಾಸ್​ ಗೋಪಾಲಕೃಷ್ಣನ್​ ಎಂಬಾತನ್ನು ಬಂಧಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆಯುತ್ತಿದ್ದ ನಕಲಿ ಆನ್​ಲೈನ್​ ವಂಚಕರ ಜಾಲವನ್ನು ಪೊಲೀಸರು ಪತ್ತೆಮಾಡಿ, ಬಂಧಿಸಿದ್ದಾರೆ.

ನಟಿ ಕಾಜಲ್ ಅಗರ್ ವಾಲ್ ರನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಕಳೆದುಕೊಂಡ ಅಭಿಮಾನಿ
Kajal Aggarwal’s fan wanted to meet his favourite star, duped of Rs 75 lakhs