ಕಬಿನಿ ಜಲಾಶಯದಿಂದ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ

ಮೈಸೂರು ಜುಲೈ, 12,2025 (www.justkannada.in): ಜಿಲ್ಲೆಯ ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿಗಾಗಿ ‘ಕಟ್ಟು ನೀರು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ ಹರಿಸಿ, 10 ದಿನ ನಿಲ್ಲಿಸುವುದು) ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಇಂದು ಕಾಡಾದಲ್ಲಿರುವ ನೀರಾವರಿ ಇಲಾಖೆಯ ದಕ್ಷಿಣ ವಲಯ ಮುಖ್ಯ ಎಂಜಿನಿಯರ್‌ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜುಲೈ 15 ರಿಂದ  ಕೆರೆಕಟ್ಟೆಗಳಿಗೆ  ಹಾಗೂ ಜುಲೈ 25 ರಿಂದ ಕಟ್ಟು ಪದ್ದತಿಯ  ಆಧಾರದಲ್ಲಿ ಕಬಿನಿ ಜಲಾಶಯದ ನಾಲಾ ಜಾಲಗಳಲ್ಲಿ  ನೀರು ಹರಿಸುವುದಾಗಿ ಪ್ರಕಟಿಸಲಾಯಿತು.

ನಾಲಾ ಜಾಲದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನೀರಾವರಿ ಇಲಾಖೆಯಿಂದ ಮಾಹಿತಿ ಪಡೆದ ಸಚಿವ ಹೆಚ್.ಸಿ ಮಹದೇವಪ್ಪ ನಾಲೆಯಲ್ಲಿ ಹೂಳು ಹಾಗೂ ಜಂಗಲ್ ತೆರವುಗೊಳಿಸಿ ನಂತರ ನೀರು ಹರಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.

ನಾಲೆಗಳಲ್ಲಿ ಹೂಳು ತೆರವುಗೊಳಿಸುವ ಮೂಲಕ ಕೊನೆಯವರೆಗೂ ನೀರು ತಲುಪುವಂತೆ ನಿರ್ವಹಣೆ ಮಾಡಬೇಕು  ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.

ಸಭೆಯಲ್ಲಿ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೊಳ್ಳೆಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ಕೃಷ್ಣಮೂರ್ತಿ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕ  ಎಂ.ಆರ್‌.ಮಂಜುನಾಥ್‌, ವಿಧಾನ ಪರಿಷತ್ ಸದಸ್ಯ  ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಲಕ್ಷ್ಮೀ ಕಾಂತ ರೆಡ್ಡಿ, ಚಾಮರಾಜನಗದ ಜಿಲ್ಲಾಧಿಕಾರಿಗಳಾದ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ಹಾಗೂ ಕಬಿನಿ ನೀರಾವರಿ ಸಲಹಾ ಸಮಿತಿಯ ಕಬಿನಿ  ಅಧೀಕ್ಷಕ ಇಂಜಿನಿಯರ್ ಮಹೇಶ.ಕೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.vtu

Key words: release,  water, Kabini reservoir, canals