ಮೈಸೂರು,ಜನವರಿ,20,2026 (www.justkannada.in): ಕೇಂದ್ರ ಸರಕಾರ ರಾಜ್ಯಗಳ ಅನುದಾನ ಹಂಚಿಕೆಯಲ್ಲಿ ಹಿಂದಿ ಭಾಷಾವಾರು ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಎಂದಿನಂತೆ ಈ ಬಾರಿಯೂ ರಾಜ್ಯಕ್ಕೆ ಬಿಡಿಗಾಸು ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ. ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸ್ವೀಕರಿಸುವ ಸರಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಮಾತ್ರ ತೀವ್ರ ತಾರತಮ್ಯ ಮಾಡುತ್ತಲೇ ಇದೆ. ಚುನಾವಣೆ ವೇಳೆ ಏನೇನೋ ಮಹಾ ಭರವಸೆ ನೀಡಿ ಮತ ಪಡೆಯುವ ಬಿಜೆಪಿ ಆ ನಂತರ ರಾಜ್ಯವನ್ನು ಮರೆಯುವ ಖಯಾಲಿ ಬೆಳೆಸಿಕೊಂಡಿದೆ. ಆಡಳಿತದಲ್ಲಿನ ಮಿತ್ರರನ್ನು ಮೆಚ್ಚಿಸಲು ಮುಂದಾಗಿರುವ ಮೋದಿ ಅವರು, ನೆರೆ ರಾಜ್ಯ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಭರಪೂರ ಅನುದಾನ ನೀಡುವ ಮೂಲಕ ಓಲೈಕೆ ರಾಜಕಾರಣಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದ ಹಪಾಹಪಿಯಿಂದ ರಾಜ್ಯಕ್ಕೆ ಅನ್ಯಾಯ
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ ಹಪಾಹಪಿಯಿಂದ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಪದೇ ಪದೆ ಅನ್ಯಾಯವಾಗುತ್ತಲೇ ಇದೆ. ಯಾವಾಗಲೂ ಅಧಿಕಾರದಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ಹಿಂದಿ ಮಾತನಾಡುವ ರಾಜ್ಯಗಳಿಗೆ ಅನುದಾನದ ಹೊಳೆ ಹರಿಸಲಾಗುತ್ತಿದೆ. ಇದರ ಜತೆಗೆ ತಮ್ಮ ಪೊಲಿಟಿಕಲ್ ಪಾಟ್ನರ್ ಗಳನ್ನು ಓಲೈಸುವ ಮತ್ತು ಅವರ ನೆಲೆ ಗಟ್ಟಿಗೊಳಿಸುವ ಉದ್ದೇಶದಿಂದ ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಅನುದಾನ ನೀಡಲಾಗುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾಗಲೂ ರಾಜ್ಯಕ್ಕೆ ಅನ್ಯಾಯವಾಗಿತ್ತು. ಆ ವೇಳೆಯೂ ರಾಜ್ಯದ ಪಾಲು ನ್ಯಾಯಯುತವಾಗಿ ನಮಗೆ ಸಿಗಲಿಲ್ಲ. ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕಿದ್ದರೆ ಪ್ರತಿ ರಾಜ್ಯಕ್ಕೂ ಅದರ ಪಾಲನ್ನು ಸರಕಾರ ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು, ಆದ್ಯತೆ ನೀಡಬೇಕು. ಆದರೆ, ಕೇಂದ್ರದ ಪ್ರತಿ ನಡೆಯೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೆ.ವಿ ಮಲ್ಲೇಶ್ ಕಿಡಿಕಾರಿದರು.
ಧ್ವನಿ ಸತ್ತ ಸಂಸದರು:
ರಾಜ್ಯದಲ್ಲಿನ ಬಿಜೆಪಿಯ ಕೇಂದ್ರ ಸಚಿವರು, ಸಂಸದರು ಧ್ವನಿ ಸತ್ತವರಾಗಿದ್ದಾರೆ. ಮೇಲಿಂದ ಮೇಲೆ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದರೂ ಆ ಬಗ್ಗೆ ತಮ್ಮದೇ ನಾಯಕರ ಬಳಿ ಕೇಳಲು ವಿಫಲರಾಗಿದ್ದಾರೆ. ಒಂದರ್ಥದಲ್ಲಿ ತಮ್ಮ ಸರ್ವಾಧಿಕಾರಿ ನಾಯಕನ ವಿರುದ್ಧ ಇವರೆಲ್ಲ ಧ್ವನಿ ಸತ್ತವರಂತಾಗಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅವರಂತಹ ನಾಯಕರು ಬಾಯ್ಮುಚ್ಚಿ ಕುಳಿತುಕೊಳ್ಳುವ ಬದಲು ಸ್ವಾಭಿಮಾನದಿಂದ ರಾಜೀನಾಮೆ ಕೊಟ್ಟು ಹೊರಬರುವುದು ಮೇಲು ಎಂದು ಕೆ.ವಿ ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್ಡಿಕೆಗೂ ಇಲ್ಲ ಮನ್ನಣೆ:
ರಾಜ್ಯ ಖಾತೆ ಸಚಿವರಿಗೆ ಸಿಗುತ್ತಿರುವ ಅನುದಾನ, ಮನ್ನಣೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಗದಿರುವುದು ಸ್ವಾಭಿಮಾನಿ ಮಣ್ಣಿನ ಮಕ್ಕಳಿಗಾದ ಅವಮಾನವಲ್ಲದೇ ಬೇರೇನಲ್ಲ. ಸಂಪುಟ ಖಾತೆ ಸಚಿವರಿಗಿಂತ ರಾಜ್ಯ ಖಾತೆ ಸಚಿವರಿಗೆ ಹೆಚ್ಚು ಅನುದಾನ ಲಭ್ಯವಾಗುತ್ತಿದೆ. ಅಲ್ಲದೆ, ಅವರ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಿದೆ ಎಂದರೆ ಏನರ್ಥ? ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಕೂಡಲೇ ಈ ಬಗ್ಗೆ ಪ್ರತಿಭಟನಾರ್ಥವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರದಿಂದ ಹೊರಬರುವ ಮೂಲಕ ಕನ್ನಡಿಗರ, ಮಂಡ್ಯದ ಸ್ವಾಭಿಮಾನ ಕಾಪಾಡಬೇಕು ಎಂದು ಕೆ.ವಿ ಮಲ್ಲೇಶ್ ಸಲಹೆ ನೀಡಿದರು.
ಕೇಂದ್ರ ಬಿಜೆಪಿ ನಾಯಕರು ಈ ಬಗ್ಗೆ ಇನ್ನಾದರೂ ಗಮನಹರಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು. ರಾಜ್ಯದ ಪಾಲನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡಬೇಕು. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಸಮಗ್ರ ಮಾಹಿತಿ ನೀಡಿ ರಾಜ್ಯಕ್ಕೆ ನ್ಯಾಯಯುತ ಅನುದಾನ ತರಲು ಶ್ರಮಿಸಬೇಕು ಎಂದು ಆಗ್ರಹಿಸಿದರು.
Key words: K.V. Mallesh, Injustice, state, BJP, MPs







