ಸೆಸ್ಕ್‌ ಎಂಡಿ ಕೆ.ಎಂ. ಮುನಿಗೋಪಾಲ್‌ ರಾಜು ನಿವೃತ್ತಿ: ಸಾಧನೆ, ಕಾರ್ಯವೈಖರಿಗೆ ಶ್ಲಾಘನೆ

ಮೈಸೂರು, ಮಾರ್ಚ್, 24, 2026 (www.justkannada.in): ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಚಾವಿಸನಿನಿ/ಸೆಸ್ಕ್‌)ಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಮಾರ್ಚ್ 31ರಂದು ವಯೋ ನಿವೃತ್ತಿ ಹೊಂದುತ್ತಿದ್ದಾರೆ.

ನಿಗಮದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ತಾಂತ್ರಿಕ ನಿರ್ದೇಶಕರಾಗಿ ಹಾಗೂ ನಂತರ ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ನಿಗಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಅವರು, ವಿದ್ಯುತ್‌ ಸರಬರಾಜಿನ ಗುಣಮಟ್ಟವನ್ನು ಹೆಚ್ಚಿಸುವುದು, ತಾಂತ್ರಿಕ ವ್ಯವಸ್ಥೆಗಳ ಆಧುನೀಕರಣ, ಹಾಗೂ ಗ್ರಾಹಕ ಸ್ನೇಹಿ ಸೇವೆಗಳ ಜಾರಿಗೆ ಮಹತ್ವದ ಆದ್ಯತೆ ನೀಡಿದರು.

ಇವರ ನೇತೃತ್ವದಲ್ಲಿ ಸೆಸ್ಕ್‌ ವ್ಯಾಪ್ತಿಯಲ್ಲಿ ಹಲವು ಮಹತ್ವದ ಯೋಜನೆಗಳು ರೂಪುಗೊಂಡು, ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ವಿದ್ಯುತ್‌ ಪೂರೈಕೆಯ ಸ್ಥಿರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಗಮನಾರ್ಹ ಫಲಿತಾಂಶಗಳನ್ನು ತಂದಿವೆ. ನಿಗಮದ ಕಾರ್ಯಪದ್ಧತಿಯಲ್ಲಿ ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವರು ನೀಡಿದ ಒತ್ತು ವಿಶೇಷವಾಗಿ ಪ್ರಶಂಸನೀಯವಾಗಿದೆ.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು, ಸೆಸ್ಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಇಲಾಖೆಗಳ ಪ್ರಮುಖರು, ನಿವೃತ್ತ ಇಂಜಿನಿಯರ್‌ಗಳು ಹಾಗೂ ಪತ್ರಕರ್ತರು ಸೇರಿದಂತೆ ಅನೇಕರು ಕೆ.ಎಂ. ಮುನಿಗೋಪಾಲ್‌ ರಾಜು, ಅವರ ಸೇವೆ ಹಾಗೂ ಕಾರ್ಯಪರತೆಯನ್ನು ಶ್ಲಾಘಿಸಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದ್ದಾರೆ.

ಸೇವಾ ಅವಧಿಯ ಪ್ರಮುಖ ಸಾಧನೆಗಳು:

ಕೆ.ಎಂ. ಮುನಿಗೋಪಾಲ್‌ ರಾಜು ಅವರ ನೇತೃತ್ವದಲ್ಲಿ ಸೆಸ್ಕ್‌ ಹಲವು ಪ್ರಮುಖ ಸಾಧನೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ.

– 2025ರ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ

– 3000 ಡ್ರೋನ್‌ ಗಳ ಪ್ರದರ್ಶನದ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಾಣಕ್ಕೆ ಸಹಕಾರ

– ವಿದ್ಯುತ್‌ ಪೂರೈಕೆಯ ಅಡಚಣೆ, ನಷ್ಟವನ್ನು ಹಾಗೂ ಅಪಘಾತಗಳನ್ನು ಕಡಿಮೆ ಮಾಡಲು ಫೀಡರ್‌ಗಳು ಮತ್ತು ಟ್ರಾನ್ಸ್‌ ಫಾರ್ಮರ್‌ ಗಳ ಸಮರ್ಪಕ ನಿರ್ವಹಣೆ.

– ಮೈಸೂರು ನಗರದಲ್ಲಿ ಸುಮಾರು 1,100 ಕಿ.ಮೀ ವ್ಯಾಪ್ತಿಯಲ್ಲಿ ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಕೆ ಕಾಮಗಾರಿ.

– ಕೊಡಗು ಜಿಲ್ಲೆಯಲ್ಲಿ ವಿದ್ಯುತ್‌ ಮಾರ್ಗಗಳ ಗುಣಮಟ್ಟ ಬಲಪಡಿಸುವ ಕಾಮಗಾರಿಗಳು

– ಸೆಸ್ಕ್‌ ವ್ಯಾಪ್ತಿಯಲ್ಲಿ ಹೊಸ ಫೀಡರ್‌ ಗಳು ಹಾಗೂ ಉಪಕೇಂದ್ರಗಳ ನಿರ್ಮಾಣ

– ನಿಗಮದ ಆಡಳಿತಾತ್ಮಕ ಮೂಲಸೌಕರ್ಯ ವೃದ್ಧಿಗಾಗಿ 4ನೇ ಮಹಡಿ ಕಾರ್ಯಾಲಯ ಹಾಗೂ ಎಂಡಿ ಗೃಹ ಕಚೇರಿ ನಿರ್ಮಾಣ, ಇತರ ವಿವಿಧ ಹೊಸ ಕಚೇರಿಗಳ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಿರುವುದು.

– ಎನರ್ಜಿ ಆಡಿಟಿಂಗ್‌ ವ್ಯವಸ್ಥೆಯ ಅನುಷ್ಠಾನ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ.

– ವಿವಿಧ ಮೂಲಗಳಿಂದ ಸೆಸ್ಕ್‌ಗೆ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚು ಹಣ ಉಳಿತಾಯ ಮಾಡಿರುವುದು.

– ಸೆಸ್ಕ್‌ ಹಾಗೂ ಕೆಪಿಟಿಸಿಎಲ್‌ ನ ಹಲವು ಕಟ್ಟಡಗಳ ನಿರ್ಮಾಣಕ್ಕೆ ಎಂಡಿಎ ವತಿಯಿಂದ 32 ಸಿಎ ನಿವೇಶನಗಳನ್ನು ಪಡೆದಿರುವುದು.

– PFC ರೇಟಿಂಗ್‌ನಲ್ಲಿ ಸೆಸ್ಕ್‌ಗೆ “ಎ”ಮತ್ತು “ಬಿ” ಗ್ರೇಡ್‌ ಸ್ಥಾನಗಳು.

– ಬಹು ಉಪಯುಕ್ತ ಸುಮಾರು 950 ಮೆಗಾ ವ್ಯಾಟ್‌ ನಷ್ಟು ಫೀಡರ್‌ ಸೋಲಾರೈಸೇಷನ್‌ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿರುವುದು.

– ಸೆಸ್ಕ್‌ ಸಿಬ್ಬಂದಿಗೆ ಕ್ಯಾಶ್‌ ಲೆಸ್‌ ಹೆಲ್ತ್‌ ಕಾರ್ಡ್‌ ಸೌಲಭ್ಯ ತಂದಿರುವುದು ಹಾಗೂ ವಿದ್ಯುತ್‌ ಅಪಘಾತಗಳಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ.ಗಳ ಪರಿಹಾರ ಕಲ್ಪಿಸಿರುವುದು.

ತಮ್ಮ ನಿವೃತ್ತ ಬಗ್ಗೆ ಮಾತನಾಡಿರುವ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು, “ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಇಂಧನ ಸಚಿವರು, ಸೆಸ್ಕ್‌ ಅಧ್ಯಕ್ಷರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇವರುಗಳೊಂದಿಗೆ ನನ್ನ ಸೇವಾ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಈ ಪ್ರಯಾಣದಲ್ಲಿ ಬೆಂಬಲ ನೀಡಿದ ಇಂಧನ ಇಲಾಖೆ, ಚಾವಿಸನಿನಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ವಿದ್ಯುತ್‌ ಗುತ್ತಿಗೆದಾರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

Key words: CESC, MD, K.M. Munigopal Raju, retires