ಕರೋನಾ ಕಳೆಯುವ ತನಕ ರಾಜ್ಯದ ಎಲ್ಲ ಖಾಸಗಿ ನ್ಯೂಸ್ ಚಾನಲ್ ಬಂದ್ ಮಾಡಿ : ವೈರಲ್ ಆಯ್ತು ಸಿಎಂಗೆ ಬರೆದ ಪತ್ರ.

 

ಬೆಂಗಳೂರು, ಏ.20, 2020 : (www.justkannada.in news) : ಕರ್ನಾಟಕವೂ ಸೇರಿದಂತೆ ಇತರೆ ಕೆಲ ರಾಜ್ಯಗಳಲ್ಲಿನ ಮಾಧ್ಯಮ ಪ್ರತಿನಿಧಿಗಳಿಗೆ ಕರೋನಾ ಸೊಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾಗೂ ಕುಟುಂಬದ ಹಿತದ ಸಲುವಾಗಿ ಮಾಧ್ಯಮಗಳನ್ನು ಕೆಲಕಾಲ ಮುಚ್ಚುವಂತೆ ಕ್ರಮ ಜರುಗಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ವಿನಂತಿಸಲಾಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ ಗಳ ಪತ್ರ ವೈರಲ್ ಆಗಿದೆ. ಪತ್ರಕರ್ತರ ಆರೋಗ್ಯದ ಕಾಳಜಿಗೆ ಸಂಬಂಧಿಸಿದಂತೆ ಮಾಡಿರುವ ಮನವಿಗೆ ಅಪೂರ್ವ ಬೆಂಬಲ ವ್ಯಕ್ತವಾಗಿರುವುದು ವಿಶೇಷ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರ ಹೀಗಿದೆ..

journalist-kannada-media-corona-declare-holiday-cm-letter

ಮಾನ್ಯ ಮುಖ್ಯಮಂತ್ರಿಗಳೇ,
ಆದರಪೂರ್ವಕ ನಮಸ್ಕಾರಗಳು.
ಕರೋನಾ‌ ಶುರುವಾದಾಗಿನಿಂದ ನೀವು ತೆಗೆದುಕೊಂಡ ಎಲ್ಲ ಕ್ರಮಗಳನ್ನು ಈ‌ ನಾಡಿನ ಪ್ರಜೆಗಳಾಗಿ ನಾವು ಅತ್ಯಂತ ಪ್ರಾಮಾಣಿಕವಾಗಿ ಬೆಂಬಲಿಸುತ್ತ ಬಂದಿದ್ದೇವೆ. ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸುತ್ತ ಬಂದಿದ್ದೇವೆ.

ದಯಮಾಡಿ ಈ‌ ಒಂದು ವಿಷಯದ ಕುರಿತು ಗಮನಹರಿಸಿ. ಮುಂಬೈನಲ್ಲಿ ಮೀಡಿಯಾ ಸಂಸ್ಥೆಯೊಂದರ 57 ಮಂದಿಗೆ ಕೋವಿಡ್ -19 ಸೋಂಕು ಹೊಂದಿರುವುದು ಪತ್ತೆಯಾಗಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಇವರ ಪೈಕಿ ವರದಿಗಾರರು, ಕ್ಯಾಮೆರಾಮನ್ ಗಳಿಂದ ಹಿಡಿದು ಮೀಡಿಯಾ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಯೂ ಸಹ ಸೇರಿದ್ದಾರೆ. ಇದು ನಮ್ಮ ರಾಜ್ಯಕ್ಕೂ ಎಚ್ಚರಿಕೆಯ ಕರೆಘಂಟೆ.

ತಮಗೆ ತಿಳಿದ ಹಾಗೆ ಮೀಡಿಯಾ ಸಿಬ್ಬಂದಿ ತಾವೂ ಸೇರಿದಂತೆ, ತಮ್ಮ ಮಂತ್ರಿಮಂಡಲದ ಸದಸ್ಯರು, ಅಧಿಕಾರಿಗಳ ಬೈಟ್ ಪಡೆಯುತ್ತಿರುತ್ತಾರೆ. ನಾವು ಗಮನಿಸಿದಂತೆ ಅವರು ಸುರಕ್ಷಿತ ದೈಹಿಕ ಅಂತರವನ್ನು ಕಾಪಾಡುತ್ತಿಲ್ಲ. ಇದಲ್ಲದೆ ಅವರು ರಸ್ತೆಗಳಲ್ಲಿ ಜನಸಾಮಾನ್ಯರನ್ನು ಸಹ ಸಂದರ್ಶಿಸುತ್ತಿರುತ್ತಾರೆ. ಒಂದು ವೇಳೆ ಒಬ್ಬನೇ ಒಬ್ಬ ಪತ್ರಕರ್ತನಿಗೆ ಸೋಂಕು ತಗುಲಿದರೂ ಅದು ಎಲ್ಲ ಮೀಡಿಯಾ ಸಂಸ್ಥೆಗಳಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಅವರ ಸಂಪರ್ಕಕ್ಕೆ ಬರುವ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು, ಜನಸಾಮಾನ್ಯರಿಗೂ ಸೋಂಕು ಹರಡುವ ಅಪಾಯವಿರುತ್ತದೆ. ಇದು ಅತ್ಯಂತ ಅಪಾಯಕಾರಿ.

ತಾವು ಗಮನಿಸಿದಂತೆ ಹೈಕೋರ್ಟ್, ಸುಪ್ರೀಂಕೋರ್ಟ್ ಗಳೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿವೆ. ಸ್ವತಃ ಪ್ರಧಾನಿ ಮೋದಿಯವರೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವಿಷಮ ಕಾಲದಲ್ಲಿ ಇದೆಲ್ಲವೂ ಅನಿವಾರ್ಯವಾಗಿದೆ.

ಇದೆಲ್ಲವನ್ನು ಗಮನಿಸಿ, ಈ ಕೂಡಲೇ ಎಲ್ಲ ಖಾಸಗಿ ವಾಹಿನಿಗಳನ್ನು ಈಗಿಂದೀಗಲೇ ಬಂದ್ ಮಾಡಿಸಬೇಕಾಗಿ ತಮ್ಮಲ್ಲಿ ವಿನಂತಿ‌ ಮಾಡುತ್ತೇವೆ. ಸರ್ಕಾರದ ಎಲ್ಲ ಸೂಚನೆಗಳು, ಮಾರ್ಗದರ್ಶನವನ್ನು ದೂರದರ್ಶನ ಚಂದನ ವಾಹಿನಿಯ ಮೂಲಕ ಸಾಮಾನ್ಯ ಜನರನ್ನು ತಲುಪಿಸಬಹುದಾಗಿದೆ. ಕರೋನಾ ಕಂಟಕ‌ ಮುಗಿದ ನಂತರ ಖಾಸಗಿ ಚಾನಲ್ ಗಳ ಪುನರಾರಂಭಕ್ಕೆ ಅವಕಾಶ ನೀಡಬಹುದಾಗಿದೆ. ತಾವು ದಯಮಾಡಿ, ಈ ಕೋರಿಕೆಯನ್ನು ಮಾನ್ಯ ಮಾಡಿ ತಕ್ಷಣವೇ ಕ್ರಮ ಕೈಗೊಂಡು ಜನರ ಜೀವರಕ್ಷಣೆ ಮಾಡಬೇಕಾಗಿ ಕೋರುತ್ತೇವೆ.

 

key words : journalist-kannada-media-corona-declare-holiday-cm-letter