ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ. ಪ್ರವೀಣ್ ಇನ್ನಿಲ್ಲ.

ಬೆಂಗಳೂರು,ನವೆಂಬರ್,29,2023(www.justkannada.in): ಶ್ವಾಸಕೋಶದ ಸೋಂಕಿಗೆ ಒಳಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ  ರಾ. ಪ್ರವೀಣ್, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 6 ಗಂಟೆಗೆ ನಿಧನರಾದರು.

ರಾ. ಪ್ರವೀಣ್  ಅವರಿಗೆ 55 ವರ್ಷ ವಯಸ್ಸಾಗಿತ್ತು. ಪತ್ನಿ ಕೋಮಲ, ಮಗ ತನೀಶ್ ಮತ್ತು ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಆನೇಕಲ್ ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೂಲತಃ ಆನೇಕಲ್ ನವರಾದ,ಶ್ರೀರಾಮ್ ಪುರ ವಾಸಿ ರಾ. ಪ್ರವೀಣ್ ಅಣ್ಣಾವ್ರ ಅಪ್ಪಟ ಅಭಿಮಾನಿ. ಜೊತೆಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ಹಿರಿಯ ಪತ್ರಕರ್ತರು, ಸಾಹಿತಿ, ಕನ್ನಡ ಚಳುವಳಿ ನಾಯಕರಾದ ಜಾಣಗೆರೆ ಅಂಗಳದಿಂದ ಬಂದ ಪ್ರವೀಣ್, ಬರೆಯೋದನ್ನ ರೂಢಿಸಿಕೊಂಡು ಹಾಯ್ ಬೆಂಗಳೂರು, ಅಗ್ನಿ ಪತ್ರಿಕೆ, ಚಾರ್ಜ್ ಶೀಟ್ ಪತ್ರಿಕೆಗಳಲ್ಲಿ ರೋಚಕ ಕ್ರೈಂ ಸ್ಟೋರಿಗಳನ್ನು ಬರೆದು ಹೆಸರು ಮಾಡಿದ್ದರು. ಪ್ರಜಾ ಟಿವಿಯಲ್ಲೂ ಒಂದಿಷ್ಟು ವರ್ಷ ಕೆಲಸ ಮಾಡಿದ್ದರು.

ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಂ ಡೈರಿಗೆ ಸೇರಿಕೊಂಡ ಪ್ರವೀಣ್ ಅಲ್ಲೂ ಒಳ್ಳೆಯ ಹೆಸರು ಮಾಡಿದರು. ಸುಮಾರು 35 ವರ್ಷಗಳ ಸುದೀರ್ಘ ಕಾಲ  ಮಾಧ್ಯಮದಲ್ಲಿ ಕೆಲಸ ಮಾಡಿದ ರಾ.ಪ್ರವೀಣ್ ಇತ್ತೀಚೆಗೆ ತಮ್ಮದೇ ‘ ರಾ ‘ ಹೆಸರಿನ ಯೂ ಟ್ಯೂಬ್ ಚಾನೆಲ್ ಮಾಡಿಕೊಂಡು ಅದರಲ್ಲಿ ತೊಡಗಿಸಿ ಕೊಂಡಿದ್ದರು.

Key words: Journalist – crime diary- fame- Praveen – no more.