ಮೈಸೂರು,ಅಕ್ಟೋಬರ್,31,2025 (www.justkannada.in): ಪ್ರಸಕ್ತ 2025ನೇ ಸಾಲಿನಲ್ಲಿ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಅಂಶಿ ಪ್ರಸನ್ನಕುಮಾರ್ ಹಳೆ ಮೈಸೂರು ಭಾಗದ ಪತ್ರಿಕೋದ್ಯೋಗ ವಲಯದ ಮುಂಚೂಣಿ ಹೆಸರು.
-ಕಳೆದ ನಾಲ್ಕು ದಶಕಗಳಿಂದಲೂ ಮೈಸೂರು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಸನ್ನಕುಮಾರ್, ಈ 40 ವರ್ಷಗಳ ಕಾಲದ ಮೈಸೂರು ಭಾಗದ ಎಲ್ಲ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಗುಹೋಗುಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಸಾಕ್ಷಿಪ್ರಜ್ಞೆಯೂ ಹೌದು.
-20ನೇ ಶತಮಾನದ 80ರ ದಶಕವದು. ಆಗಿನ್ನೂ ಅಂಶಿ ಕಾಲೇಜು ವಿದ್ಯಾರ್ಥಿ. ಆ ದಿನಗಳಲ್ಲಿಯೇ ಬರಹದ ಗೀಳು ಹಚ್ಚಿಸಿಕೊಂಡ ಅಂಶಿ, ಅತ್ಯಂತ ಚಿಕ್ಕವಯಸ್ಸಿಗೆ ಮೈಸೂರು ಪತ್ರಿಕೋದ್ಯೋಗ ಪ್ರವೇಶಿಸಿದರು. ಕೆಲದಿನಗಳಲ್ಲಿಯೇ ‘ಆಂದೋಲನ’ ಪತ್ರಿಕೆಯ ಮೂಲಕ ಸದ್ದು ಮಾಡಿದರು. ಆರಂಭಿಕ ಒಂದಿಷ್ಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕನ್ನಡಪ್ರಭಾ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಬಳಿಕ ಮೈಸೂರು ಕೇಂದ್ರಿತವಾಗಿಯೇ ಕನ್ನಡಪ್ರಭಾ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾ, ಸದ್ಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
-40 ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಸತ್ಯದೇವ್ ಕೊಲೆ ಪ್ರಕರಣವನ್ನು ಭೇದಿಸಿದ್ದು ಅಂಶಿ ಅವರು ತನಿಖಾ ಪತ್ರಿಕೋದ್ಯೋಗದಲ್ಲಿ ಛಾಪು ಮೂಡಿಸಿದರು.
-ಬಳಿಕ 20ನೇ ಶತಮಾನದ ಅಂತ್ಯ ಹಾಗೂ 21ನೇ ಶತಮಾನದ ಮೊದಲ ದಶಕವನ್ನು ಇನ್ನಿಲ್ಲದಂತೆ ಕಾಡಿದ ಕಾಡುಗಳ್ಳ ವೀರಪ್ಪನ್ ಕೃತ್ಯಗಳನ್ನು ಸಮಗ್ರವಾಗಿ ವರದಿ ಮಾಡಿದರು.
1980ರ ಬಳಿಕ ಮೈಸೂರು ಭಾಗ, ಅಷ್ಟೇ ಏಕೆ ಇಡೀ ಕರ್ನಾಟಕದಲ್ಲಿ ನಡೆದಿರುವ ಎಲ್ಲ ಚುನಾವಣೆಗಳ ಕುರಿತ ಜೀವಂತ ವಿಕಿಪೀಡಿಯಾ ಅವರು. ಚುನಾವಣೆಗಳ ವಿಶ್ಲೇಷಣೆ ಹಾಗೂ ಅಂಕಿ-ಸಂಖ್ಯೆ ನಾಲಿಗೆಯಲ್ಲಿಯೇ ನಲಿದಾಡುತ್ತಿವೆ.
-ಉಳಿದಂತೆ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ, ಕೃಷಿಸಂಬಂಧಿತ ವಿಷಯಗಳ ಬಗ್ಗೆ ಅವರು ಮಾಡುತ್ತಿದ್ದ ವರದಿಗಳು ಬಹುಬೇಗ ಅವರನ್ನು ಜನಪ್ರಿಯಗೊಳಿಸಿದವು.
-ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗದ ಯಶಸ್ವಿ ರೈತರ ಕುರಿತು ಅವರು ಪ್ರಕಟಿಸಿದ ಅನ್ನದಾತರ ಸರಣಿ ವರದಿಗಳು ಕನ್ನಡ ಪತ್ರಿಕೋದ್ಯೋಗದ ಒಂದು ಮೈಲುಗಲ್ಲು. ಇವುಗಳೇ ‘ಅನ್ನದಾತರ ಆತ್ಮಕಥೆ’ ಕೃತಿಯಾಗಿ ಹೊರಬಂದಿವೆ. ಅಂಶಿ ನಮ್ಮ ನಡುವಿನ ಉತ್ತಮ ಲೇಖಕರೂ ಹೌದು ‘ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ’, ‘ಮೈಸೂರು ರಾಜರು ಮತ್ತು ದಸರಾ’, ‘ಮೈಸೂರೆಂಬ ಪ್ರವಾಸಿ ಸ್ವರ್ಗ’, ‘ಕಾಡಿನ ಜಾತ್ರೆ’, ‘ಕಾಡುಜೀವನ’, ‘ಅನುಭವ ಮಂಟಪ’, ‘ಸುತ್ತೂರು ಶ್ರೀಕ್ಷೇತ್ರ ದರ್ಶನ’, ‘ಸಾಹಿತ್ಯ ಸಾಂಗತ್ಯ’, ‘ಸಾಹಿತ್ಯ ಸಂಗಮ’, ‘ಸಾಹಿತ್ಯ ಸಂಪದ’, ‘ ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿತಾಣಗಳು’ ಸೇರಿದಂತೆ 26 ಕೃತಿಗಳನ್ನು ಪ್ರಕಟಿಸಿದ್ದಾರೆ.
-ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಮುಕ್ತ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಪರ್ಕ ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ.
ಮೂರು ವರ್ಷ ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ [ಬಿಒಎಸ್] ಸದಸ್ಯರಾಗಿದ್ದರು. ನಂತರ ಮೂರು ವರ್ಷ ಕರ್ನಾಟಕ ರಾಜ್ಯ ರಾಜ್ಯ ಮುಕ್ತ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮಂಡಳಿ ಸದಸ್ಯರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಕ್ರೀಡಾ ಮಂಡಳಿ,  ಜೆಎಸ್ಎಸ್   ಮಹಾವಿದ್ಯಾಪೀಠದ ‘ಜೆಎಸ್ಎಸ್ ವಾರ್ತಾಪತ್ರ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ.
ಹಲವಾರು ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ.
– ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ, ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ಹಳೆಯ ಮೈಸೂರು ಜಿಲ್ಲೆಗಳ ವ್ಯಾಪ್ತಿಯ ಸಾಧಕರಿಗೆ ಜಿಲ್ಲಾಡಳಿತ ನೀಡುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ನಿಂದ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ 75 ಪ್ರಶಸ್ತಿಗಳು ಸಂದಿವೆ.
-ಅಂಶಿ ಪ್ರಸನ್ನಕುಮಾರ್ ಎಂದೇ ಪ್ರಸಿದ್ಧಿಯಾಗಿರುವ ಅಂಬಿಗರಹಳ್ಳಿ ಶಿವಣ್ಣ ಪ್ರಸನ್ನಕುಮಾರ್ ಅವರನ್ನು ಜಸ್ಟ್ ಕನ್ನಡ ಅಭಿನಂದಿಸುತ್ತದೆ.
Key words: Wikipedia, Old Mysore, Journalist, Amshi Prasanna Kumar
 
            
