ಮೈಸೂರು,ನವೆಂಬರ್,22,2025 (www.justkannada.in): ಮಾಹಿತಿ ಹಕ್ಕು ಕಾಯ್ದೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪತ್ರಕರ್ತರಾಗಲು, ಮೂಲೆ ಸೇರಿರುವ ತನಿಖಾ ಮತ್ತು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಮರು ಜೀವ ನೀಡಬೇಕು ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಾಹಿತಿ ಆಯುಕ್ತರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿದರು.
ನಾವು ಈಗ ಊಹಾ ಪತ್ರಿಕೋದ್ಯಮದಿಂದ ಹೊರಬಂದು, ನೈಜ ಪತ್ರಿಕೋದ್ಯಮದತ್ತ ಮುಖ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಮೂಲೆ ಸೇರಿದೆ. ಮಾಹಿತಿ ಹಕ್ಕು ಎಂಬ ಪ್ರಬಲ ಕಾಯ್ದೆ ಜಾರಿಗೊಳ್ಳಲು ಕೂಡ ಅನೇಕ ಹೋರಾಟ ನಡೆದಿದೆ. ಇಂತಹ ಕಾಯ್ದೆಯನ್ನು ಪತ್ರಕರ್ತರು ಬಳಸಿಕೊಳ್ಳಬೇಕು ಮತ್ತು ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.
ನಾನು ಆಯುಕ್ತನಾದ ಮೇಲೆ ಸುಮಾರು 5 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ. ಈ ಪೈಕಿ ಕಾರ್ಯನಿರತ ಪತ್ರಕರ್ತರು ಅರ್ಜಿ ಹಾಕಿರುವುದು ಕಡಿಮೆ. ಪತ್ರಕರ್ತರ ಹೆಸರಿನಲ್ಲಿ ಯಾರು ಯಾರೋ ಅರ್ಜಿ ಸಲ್ಲಿಸುತ್ತಾರೆ. ಆದರೆ ನೈಜ ಪತ್ರಕರ್ತರು ಅರ್ಜಿ ಸಲ್ಲಿಸುವಾಗ ದಿಕ್ಕು ತಪ್ಪಿಸುವುದುಂಟು. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಕೇಂದ್ರದಲ್ಲಿ ಮನಮೋಹನ ಸಿಂಗ್ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿದ ಕೂಡಲೇ ಆ ಕಾಯ್ದೆಯನ್ನು ಮೊದಲು ಅಳವಡಿಸಿಕೊಂಡಿದ್ದು ಕರ್ನಾಟಕ. ನಾವು ಮೊದಲು ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಯಾವುದೇ ಸಂಸ್ಥೆಯೂ ಕೂಡ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಹೈ ಕೋರ್ಟ್ ಆದೇಶಿಸಿದೆ ಎಂದು ರುದ್ರಣ್ಣ ಹರ್ತಿಕೋಟೆ ಅವರು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆ ಕುರಿತು ಮಾತ್ರವಲ್ಲದೆ, ಈ ಸಂಬಂಧ ಜಾರಿಯಾದ ನ್ಯಾಯಾಲಯದ ಆದೇಶವನ್ನು ಪತ್ರಕರ್ತರು ಓದಿಕೊಳ್ಳಬೇಕು. ಇದರಲ್ಲಿ ಅಧ್ಯಯನ ಬಹಳ ಮುಖ್ಯ ಎಂದರು.
ಅಭಿನಂದನೆ ಸ್ವೀಕರಿಸಿದ ಹಿರಿಯ ಪತ್ರಕರ್ತರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯು ಪತ್ರಕರ್ತರಿಗೆ ಹೇಗೆ ಉಪಯೋಗವಾಗುತ್ತದೆ. ಆಯೋಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಅರಿವನ್ನು ಬೆಳಸಿಕೊಳ್ಳಿ. ನೈತಿಕತೆ, ವಿಶ್ವಾಸಾರ್ಹಯೊಂದಿಗೆ ಸರ್ಕಾರ ಮತ್ತು ಸಮಾಜದ ಸೇತುವೆಯಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಯಾವುದೇ ಅರ್ಜಿ ಆಹ್ವಾನಿಸದೆ 7 ಕೋಟಿ ಜನಸಂಖ್ಯೆಯಲ್ಲಿ 70 ಮಂದಿ ಅರ್ಹರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರಶಸ್ತಿಯನ್ನು ನಾನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪತ್ರಕರ್ತರ ಪರವಾಗಿ ಸ್ವೀಕರಿಸಿದ್ದೇನೆ ಎಂದರು.
ಮತ್ತೋರ್ವ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಬೇರೆ ಬೇರೆ ಸ್ವರೂಪದಲ್ಲಿ ಸಹಾಯವಾಗುತ್ತದೆ. ನಮ್ಮ ವೃತ್ತಿಗೆ ಇದು ದೊಡ್ಡ ಅಸ್ತ್ರ. ಇದನ್ನು ಹೆಚ್ಚು ಹೆಚ್ವು ಬಳಸಿಕೊಳ್ಳಬೇಕು. ಎಲ್ಲಾ ಕಾಯ್ದೆಯಂತೆ ಇದೂ ಕೂಡ ದುರ್ಬಳಕೆ ಆಗುತ್ತದೆ. ಅದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುವುದು ಎಂಬುದು ಮುಖ್ಯ. ಸದುದ್ದೇಶದಿಂದ ಇದನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು ಎಂದರು.
ಮಾಹಿತಿ ಹಕ್ಕು ಮತ್ತು ಕಾಯ್ದೆ ಕುರಿತು ಕೆಲವರಿಗೆ ಅರಿವೇ ಇರುವುದಿಲ್ಲ. ಈ ಬಗ್ಗೆ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಅಧಿಕಾರಿ ವರ್ಗ ಪ್ರಜೆಗಳನ್ನು ಸತಾಯಿಸಬಹುದು. ಅಂತಹ ಅಧಿಕಾರಿಗಳ ನಿಯಮದ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ನಷ್ಟ ಪರಿಹಾರಕ್ಕೂ ಅವಕಾಶವಿದೆ. ನಾವು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾವು ಆಯುಕ್ತರಾದ ಮೇಲೆ ಸುಮಾರು 25 ಸಾವಿರ ಅರ್ಜಿ ವಿಲೇವಾರಿ ಮಾಡಿದ್ದೇವೆ. ಅಲ್ಲದೆ ಮಾಹಿತಿ ಹಕ್ಕು ಆಯೋಗವು ಹೆಚ್ಚು ಕ್ರಿಯಾಶೀಲವಾಗಿದೆ. ಕೆಲವೊಂದು ನ್ಯೂನ್ಯತೆಗಳನ್ನು ತಿಳಿಸಿದರೆ ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ಈ ಕಾಯ್ದೆಯನ್ನು ಅನೇಕ ಕಡೆಗಳಲ್ಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಕುರಿತ ನಡಾವಳಿಯನ್ನು ಕೆಡಿಪಿ ಸಭೆಯಲ್ಲಿ ಕಾರ್ಯಸೂಚಿಯನ್ನಾಗಿ ಮಾಡಿದರೆ ಆಯೋಗಕ್ಕೆ ಇರುವ ಒತ್ತಡ ಕಡಿಮೆಯಾಗಿ ಸಾರ್ವಜನಿಕರ ದೂರಿಗೆ ಬೇಗ ಪರಿಹಾರ ದೊರಕಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮಾಹಿತಿ ಆಯುಕ್ತರಾದ ಎಸ್. ರಾಜಶೇಖರ್, ಡಾ. ಹರೀಶ್ ಕುಮಾರ್ ಅವರು ಮಾತನಾಡಿದರು.
ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಯಾಶಂಕರ ಮೈಲಿ, ಎಚ್.ಎಸ್. ದಿನೇಶ್ ಕುಮಾರ್, ಎಂ.ಟಿ. ಯೋಗೇಶ್ ಕುಮಾರ್, ಹಂಪಾ ನಾಗರಾಜ್, ಧರ್ಮಾಪುರ ನಾರಾಯಣ್, ಮಹೇಶ್ ಭಗೀರಥ, ಕೆ.ಬಿ. ರಮೇಶ್ ನಾಯಕ, ಸುಧೀಂದ್ರ ಕುಮಾರ್, ವೀರಭದ್ರಪ್ಪ ಬಿಸ್ಲಳ್ಳಿ, ಶೇಖರ್ ಕಿರುಗುಂದ, ಎಂ.ಎ. ಶ್ರೀರಾಮ್, ಈ. ಕಾರ್ತಿಕ್, ರಾಜ್ಯ ಸಮಿತಿಗೆ ಆಯ್ಕೆಯಾದ ಬಿ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಉಪಾಧ್ಯಕ್ಷ ರವಿ ಪಾಂಡವಪುರ, ದಾ.ರಾ. ಮಹೇಶ್ ಇದ್ದರು.
Key words: Investigative, developmental, journalism, RTI Act, Rudranna Hartikote







