ಪಾಲಿಟೆಕ್ನಿಕ್, ಜಿಟಿಟಿಸಿಗಳಲ್ಲಿ ಕಲಿತರೆ ಉದ್ಯೋಗ ಖಚಿತ- ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್.

ಉಡುಪಿ,ಸೆಪ್ಟಂಬರ್,25,2021(www.justkannada.in):  21ನೇ ಶತಮಾನದಲ್ಲಿ ಕೈಗಾರಿಕಾಭಿವೃದ್ಧಿಗೆ ಪೂರಕವಾದ 4.0 ಮಾನದಂಡದ ಪ್ರಕಾರ ಪ್ರಸ್ತುತವಾದ ಕೋರ್ಸುಗಳನ್ನು ಸರಕಾರಿ ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿಗಳಲ್ಲಿ ಬೋಧನೆ ಮಾಡಲಾಗುತ್ತಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹೇಳಿದರು.

ಉಡುಪಿ ಜಿಲ್ಲೆಯ ಕಾಪು ಬಳಿಯ ಬೆಳಪು ಬಳಿ ಸರಕಾರಿ ಪಾಲಿಟೆಕ್ನಿಕ್ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್,  ಅತಿ ಮುಖ್ಯವಾಗಿ ರೋಬೋಟೆಕ್ಸ್ ಮತ್ತು ಆಟೋಮಷಿನ್ʼದಂಥ ಕೋರ್ಸುಗಳು ಅಭಿವೃದ್ಧಿಗೆ ಅತ್ಯಗತ್ಯ ಮಾತ್ರವಲ್ಲದೆ, ಖಚಿತ ಉದ್ಯೋಗಾವಕಾಶಕ್ಕೂ ಹೇಳಿ  ಮಾಡಿದ ಕೋರ್ಸುಗಳು ಎಂದರು.

ಈಗ ಬೋಧನೆ ಮಾಡುತ್ತಿರುವ ಪಠ್ಯದಲ್ಲಿ ಕಲಿತವರಿಗೆ ಉದ್ಯೋಗ ಖಚಿತವಾಗಿ ಸಿಕ್ಕೇ ಸಿಗುತ್ತದೆ ಅಲ್ಲದೆ, ಹೊಸ ಅವಕಾಶಗಳನ್ನು ಸೃಷ್ಟಿಸಿ ಯುವಕರನ್ನು ಭವಿಷ್ಯದ  ಸವಾಲುಗಳನ್ನು ಎದುರಿಸಲು ಸಮರ್ಥವಾಗಿ ಸಜ್ಜುಗೊಳಿಸುತ್ತದೆ ಎಂದು ಅವರು ನುಡಿದರು.

ಕೌಶಲ್ಯ ಕರ್ನಾಟಕ ನಿರ್ಮಾಣ:

ಸರಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದೇ ಸರಕಾರದ ಪ್ರಮುಖ ಉದ್ದೇಶ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆಯ ಅಡಿಯಲ್ಲಿ ಕೌಶಲ್ಯ ಕರ್ನಾಟಕ ನಿರ್ಮಾಣಕ್ಕೆ ಸರಕಾರ ಸಂಕಲ್ಪ ಮಾಡಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಸುಸಜ್ಜಿತ ಪಾಲಿಟೆಕ್ನಿಕ್

ಕಾಪು ಸಮೀಪದ ಬೆಳಪು ಬಳಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗಿರುವ ಸರಕಾರಿ ಪಾಲಿಟೆಕ್ನಿಕ್ ಕಟ್ಟಡವನ್ನು ಸಚಿವ ಅಶ್ವಥ್ ನಾರಾಯಣ್ ಉದ್ಘಾಟನೆ ನೆರವೇರಿಸಿದರಲ್ಲದೆ, ಈ ಪಾಲಿಟೆಕ್ನಿಕ್ ನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ಸ್ ಹಾಗೂ ಆಟೋಮಷಿನ್ ಕೋರ್ಸುಗಳನ್ನು ಆರಂಭ ಮಾಡಲಾಗುತ್ತಿದೆ. ಈ ಕೋರ್ಸುಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅನಮೋದನೆಯೂ ಇದೆ ಎಂದು ಹೇಳಿದರು.

5.39 ಎಕರೆ ಪ್ರದೇಶದಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ಪಾಲಿಟೆಕ್ನಿಕ್ʼಗೆ 8 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದು ಭಾಗ್ಯದ ಬಾಗಿಲಾಗಲಿದೆ ಎಂದು ಅಶ್ವಥ್ ನಾರಾಯಣ್ ನುಡಿದರು.

ಸುಸಜ್ಜಿತ ಉಪಕರಣಗಾರ ಮತ್ತು ತರಬೇತಿ ಕೇಂದ್ರ:

ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವ ಡಾ.ಅಶ್ವತ್ಥನಾರಾಯಣ ಅವರು; 14.50 ಕೋಟಿ ರೂ.ವೆಚ್ಚದಲ್ಲಿ ಈ ಜಿಟಿಟಿಸಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಈ ವರ್ಷದಿಂದಲೇ ತರಗತಿಗಳು ಶುರುವಾಗುತ್ತಿವೆ ಎಂದರು.

ನಾಲ್ಕು ವರ್ಷಗಳ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ಕೋರ್ಸುಗಳು ಇಲ್ಲಿ ಲಭ್ಯವಿದ್ದು, ಪ್ರವೇಶಾತಿಗೆ ಬಹಳ ಬೇಡಿಕೆ ಇದೆ. ಅಲ್ಲದೆ, ಇಲ್ಲಿ ಪೂರ್ಣಾವಧಿ ಮತ್ತು ಅಲ್ಪಾವಧಿ ಕೋರ್ಸುಗಳೂ ಇವೆ ಎಂದರು.

ಎರಡೂ ಕಾರ್ಯಕ್ರಮಗಳಲ್ಲಿ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಜಿ ಮೆಂಡನ್ ಮುಂತಾದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು. ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಇದ್ದರು.

Key words: Jobs – polytechnic – GTTC –guaranteed-Minister- Dr. C.N. Ashwath Narayan