ಜಿಂದಾಲ್‌ಗೆ ಭೂಮಿ ಮಾರಾಟ ನ್ಯಾಯಸಮ್ಮತ; ಎಫ್ಕೆಸಿಸಿಐ

ಬೆಂಗಳೂರು:ಜೂ-17: ವಿವಾದದ ಕೇಂದ್ರಬಿಂದು ಜಿಂದಾಲ್‌ ಪರ ದನಿ ಎತ್ತಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ), ಕೈಗಾರಿಕೆಗಳ ಹೆಸರಿನಲ್ಲಿ ರಾಜಕೀಕರಣ ಸಲ್ಲದು. ಈ ಮೊದಲೇ ಆಗಿರುವ ಒಪ್ಪಂದದಂತೆ ಉದ್ದೇಶಿತ ಕಂಪೆನಿಗೆ ಭೂಮಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ವಿವಾದ ಕೇಳಿಬಂದ ಹಿನ್ನೆಲೆಯಲ್ಲಿ ಖುದ್ದು ಎಫ್ಕೆಸಿಸಿಐ ತಂಡವು ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿದೆ. ಅದರಂತೆ ಒಟ್ಟಾರೆ ಜಿಂದಾಲ್‌ ವಿಜಯನಗರ ಸ್ಟೀಲ್‌ ಲಿ., (ಜೆಎಸ್‌ಎಲ್‌ವಿ)ಗೆ ಈವರೆಗೆ ಕೆಎಸ್‌ಐಐಡಿಸಿ ಹಾಗೂ ಸರ್ಕಾರದಿಂದ 7,742.06 ಎಕರೆ ಭೂಮಿ ಮಂಜೂರಾಗಿದೆ.

ಅದರಲ್ಲಿ ಈಗಾಗಲೇ 4,074.75 ಎಕರೆ ಭೂಮಿಯನ್ನು ವಿವಿಧ ಹಂತಗಳಲ್ಲಿ ಮಾರಾಟ ಮಾಡಿದೆ. ಉಳಿದ 3,667.31 ಎಕರೆ ಬಾಕಿ ಇದೆ. ಈ ಭೂಮಿಯನ್ನು ಮಾರಾಟ ಒಪ್ಪಂದ (ಸೇಲ್‌ಡೀಡ್‌) ಮಾಡದಿದ್ದರೆ, ಒಪ್ಪಂದದ ನಿಯಮ ಉಲ್ಲಂ ಸಿದಂತಾಗುತ್ತದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಷ್ಟಕ್ಕೂ ಜಿಂದಾಲ್‌ ಕಂಪೆನಿ ಕೇಳುತ್ತಿರುವುದು ಹೊಸ ಜಾಗ ಅಲ್ಲ; ಈಗಾಗಲೇ ತಮಗೆ ಲೀಸ್‌ ಕಂ ಸೇಲ್‌ಡೀಡ್‌ ಒಪ್ಪಂದದಡಿ ನೀಡಿದ ಜಾಗವನ್ನು. 1994ರಿಂದಲೂ 2007ರವರೆಗೆ ಹತ್ತು ವರ್ಷಗಳ ಲೀಸ್‌ ಕಂ ಸೇಲ್‌ಡೀಡ್‌ ಒಪ್ಪಂದದಂತೆ ಭೂಮಿ ನೀಡಲಾಗಿದೆ. ಈ ಬಗ್ಗೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೂ ಅರಿವಿದೆ. ಹಾಗಾಗಿ, ಭೂಮಿಯನ್ನು ನೀಡಬೇಕು. ಆ ಮೂಲಕ ರಾಜ್ಯಕ್ಕೆ ಕೈಗಾರಿಕೆಗಳು ಬರಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಾವಿರಾರು ಕುಟುಂಬಗಳು ಬೀದಿಗೆ: ಜಿಂದಾಲ್‌ ಕೈಗಾರಿಕೆಯಲ್ಲಿ 25 ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಎರಡು ಲಕ್ಷ ಜನ ನೇರ ಮತ್ತು ಪರೋಕ್ಷವಾಗಿ ಅವಲಂಬನೆ ಆಗಿದ್ದಾರೆ. ಅಲ್ಲದೆ, ಕೈಗಾರಿಕೆಯು ಈವರೆಗೆ 62,025 ಕೋಟಿ ರೂ. ಹೂಡಿಕೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲೇ 6,561 ಕೋಟಿ ರೂ. ಹೂಡಿಕೆ ಮಾಡಿದೆ. ಇಂತಹ ಸಂದರ್ಭದಲ್ಲಿ ಭೂಮಿ ನೀಡದಿದ್ದರೆ, ಲಕ್ಷಾಂತರ ಜನ ಬೀದಿಗೆ ಬರಲಿದ್ದಾರೆ ಎಂದ ಅವರು, ಈ ಸಂಬಂಧ ಶೀಘ್ರ ಎಫ್ಕೆಸಿಸಿಐ ನಿಯೋಗವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಿದೆ ಎಂದರು.

ತಪ್ಪು ಅಭಿಪ್ರಾಯ ಸಾಧ್ಯತೆ: 2020ರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಹೊರ ರಾಜ್ಯ ಮತ್ತು ದೇಶಗಳಿಗೆ ತೆರಳಿ ಹೂಡಿಕೆಗೆ ಆಹ್ವಾನ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವಿವಾದಗಳು ಹೂಡಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವುದು ಬೇಡ ಎಂದ ಅವರು, ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಹತ್ತು ವರ್ಷಗಳಿಗೆ ಲೀಸ್‌ ಕಂ ಸೇಲ್‌ಡೀಡ್‌ ವ್ಯವಸ್ಥೆಯೇ ಇದೆ ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಪಡಿಸಿದರು.

ಇದಲ್ಲದೆ, ನಗರದಲ್ಲಿ ಎತ್ತರಿಸಿದ ಕಾರಿಡಾರ್‌, ಪೆರಿಫ‌ರಲ್‌ ರಿಂಗ್‌ ರಸ್ತೆ¤, ಉಪನಗರ ರೈಲು ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಇದರಿಂದ ಕೈಗಾರಿಕೆಗಳಿಗೆ ಅನುಕೂಲ ಆಗಲಿದೆ. ಅದೇ ರೀತಿ, 2013ರಲ್ಲೇ ರಾಮನಗರ, ಮಾಗಡಿ, ಕನಕಪುರ ಸೇರಿದಂತೆ ಐದು ಕಡೆಗಳಲ್ಲಿ ಟೌನ್‌ಶಿಪ್‌ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಪೈಕಿ ಇದುವರೆಗೆ ಒಂದೂ ಆಗಿಲ್ಲ. ಈ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಸುಧಾಕರ್‌ ಶೆಟ್ಟಿ ಆಗ್ರಹಿಸಿದರು.
ಕೃಪೆ:ಉದಯವಾಣಿ

ಜಿಂದಾಲ್‌ಗೆ ಭೂಮಿ ಮಾರಾಟ ನ್ಯಾಯಸಮ್ಮತ; ಎಫ್ಕೆಸಿಸಿಐ
jindal-agrees-to-sell-land-fkcci