ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ

ಬೆಂಗಳೂರು:ಜುಲೈ-8:(www.justkannada.in) ಜೀವನ್ ಸಾಥಿ ಡಾಟ್ ಕಾಮ್ ಎಂಬ ಮ್ಯಾಟ್ರೊಮೋನಿ ವೆಬ್ ಸೈಟ್ ಮೂಲಕ ಪರಿಚಯನಾದ ವರನೊಬ್ಬ ಪ್ರತಿಷ್ಠಿತ ಕಂಪನಿಯ ಮಹಿಳಾ ಟೆಕ್ಕಿಯೊಬ್ಬರಿಗೆ 24 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ವೈವಾಹಿಕ ಜಾಲತಾಣ ಜೀವನ್‌ ಸಾಥಿ ಡಾಟ್‌ ಕಾಮ್‌ನಲ್ಲಿ ವಿಶಾಲ್‌(28) ಎಂಬಾತ ಮಹಿಳಾ ಟೆಕ್ಕಿಗೆ ಪರಿಚಯವಾಗಿದ್ದ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಯುವತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಅವರು ತಮ್ಮ ಸ್ವ ವಿವರಗಳ ಮೂಲಕ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ನೋಂದಣಿ ಮಾಡಿದ್ದರು.

ವಿಶಾಲ್‌ ಆಕೆಗೆ ಫೋನ್‌ ಕರೆ ಮಾಡಿ ವೈಟ್‌ಫೀಲ್ಡ್‌ನಲ್ಲಿರುವ ಅಮೆಜಾನ್‌ ಕಂಪನಿಯ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಪರಿಚಯ ಬಳಿಕ ‘ನಿಮ್ಮ ಮಾತು, ಗುಣ ಎಲ್ಲಾ ನನಗೆ ಇಷ್ಟ ಆಯ್ತು. ನಾವಿಬ್ಬರೂ ಮೇಡ್‌ ಫಾರ್‌ ಈಚ್‌ ಅದರ್‌ ಅನ್ನಿಸತ್ತೆ’ ಅಂತೆಲ್ಲಾ ಹೇಳಿ ನಂಬಿಸಿದ್ದ. ಹೀಗೆ ಆರಂಭವಾದ ಪರಿಚಯದಿಂದ ಇಬ್ಬರೂ ಭೇಟಿ ಆಗಿದ್ದರು. ಈ ವೇಳೆ ತನ್ನದೂ ನಿಮ್ಮ ಊರೇ. ನಿಮ್ಮ ಜಾತಿಯವನೇ ಎಂದೂ ಆತ ಹೇಳಿಕೊಂಡಿದ್ದ. ಯುವತಿ ತನ್ನನ್ನು ನಂಬಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ವಿಶಾಲ್ ತನ್ನ ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಆರಂಭಿಸಿದ್ದ.

ಇಬ್ಬರ ಭವಿಷ್ಯಕ್ಕಾಗಿ ಒಂದು ಸೈಟ್‌ ನೋಡಿದ್ದಾಗಿ, ಅಲ್ಲಿ ಮನೆ ಕಟ್ಟಲು ಪ್ಲಾನ್‌ ಮಾಡಿದ್ದಾಗಿ ನಂಬಿಸಿ, ಸೈಟ್‌ಗೆ ಸ್ವಲ್ಪ ಹಣ ಕಡಿಮೆ ಆಗಿದೆ ಎಂದು ಹೇಳಿ 2 ಲಕ್ಷ ರೂ.ಗಳನ್ನು ಸಂತ್ರಸ್ತೆಯಿಂದ ಪಡೆದುಕೊಂಡಿದ್ದ. ಮೊದಲ ಮಾತಿಗೆ ಹಣ ಹಾಕಿದ್ದಕ್ಕೆ ಸಂತಸಗೊಂಡ ವಿಶಾಲ್‌, ನಂತರ ಸತತವಾಗಿ 13 ಬಾರಿ ಹಣ ತರಿಸಿಕೊಂಡಿದ್ದಾನೆ. ಹೊಸ ಮಾಡೆಲ್‌ ಕಾರು ಬಂದಿದೆ ಎಂದು ಅದರ ಖರೀದಿಗೂ ಹಣ ಪಡೆದಿದ್ದ. ಸಂತ್ರಸ್ತೆ ಹೆಸರಿನಲ್ಲೇ ಕ್ರೆಡಿಟ್‌ ಕಾರ್ಡ್‌ ಕೂಡ ಪಡೆದುಕೊಂಡು ಅದರಲ್ಲಿ ಸುಮಾರು 23 ಲಕ್ಷ ರೂ. ಖರ್ಚು ಮಾಡಿ ಐಷಾರಾಮಿಯಾಗಿ ಕಾಲಕಳೆದಿದ್ದಾನೆ. ಹೀಗೆ ಹಣ ಕೇಳಿದಾಗ ಒಮ್ಮೆ ಯುವತಿ ತನ್ನ ಬಳಿ ಹಣ ಇಲ್ಲ ಖಾಲಿಯಾಗಿದೆ ಎಂದು ತಿಳಿಸಿದ್ದಳು. ಇದರಿಂದ ಜಗಳ ಅರಂಭವಾಗಿ ಅಂದಿನಿಂದ ವಿಶಾಲ್ ಸಂಪರ್ಕವೇ ಸಿಕ್ಕಿರಲಿಲ್ಲ.

ಈತನ ವರ್ತನೆ ಬಗ್ಗೆ ಅನುಮಾನಗೊಂಡ ಯುವತಿ ತನ್ನ ಫೇಸ್ ಬುಕ್ ಸ್ನೇಹಿತರಲ್ಲಿ ವಿಚಾರಿಸಿದಾಗ ವಿಶಾಲ್ ಗೆ ಅದಾಗಲೆ ವಿವಾಹವಾಗಿರುವುದು ಗೊತ್ತಾಗಿದೆ. ಮೋಸಹೋಗಿದ್ದನ್ನ ಅರಿತ ಸಂತ್ರಸ್ತೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿರುವ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದಾರೆ. ವಿಚಾರಣೆಗೆ ಬರುವಂತೆ ವಿಶಾಲ್ ಗೆ ಪೊಲೀಸರು ಕರೆ ಮಾಡಿದರೆ ಬರುವುದಾಗಿ ಹೇಳಿ ನಪತ್ತೆಯಾಗಿದ್ದಾನೆ. ಅಂತಿಮವಾಗಿ ಪೊಲೀಸರು ವಿಶಾಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ
Jeevan sathi,matrimony website,Groom,fraud 24 lakhs Rs,