ಹುಬ್ಬಳ್ಳಿ,ಫೆಬ್ರವರಿ,28,2026 (www.justkannada.in): ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಸೋಲಿಸುವ ಮೂಲಕ ಜಮ್ಮುಕಾಶ್ಮೀರ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದಿದೆ.
ರಣಜಿ ಟ್ರೋಫಿ ಫೈನಲ್ ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಇದೇ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಗೇರಿದ್ದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಂತರ ಮೊದಲ ಇನ್ನಿಂಗ್ಸ್ ಆಡಲು ಕಣಕ್ಕಿಳಿದ ಕರ್ನಾಟಕ ಕೇವಲ 293 ರನ್ ಗಳಿಗೆ ಆಲ್ ಔಟ್ ಆಯಿತು.
ಇತ್ತ ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜಮ್ಮುಕಾಶ್ಮೀರದ ಬ್ಯಾಟ್ಸ್ ಮನ್ ಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭಿಕ ಕಮ್ರಾನ್ ಇಕ್ಬಾಲ್ 160 ರನ್ ಬಾರಿಸಿದರೇ ಸಾಹಿಲ್ ಕೂಡ ಶತಕ ಗಳಿಸಿ ಜಮ್ಮುಕಾಶ್ಮೀರ ತಂಡ ಒಟ್ಟು ಮುನ್ನಡೆ 630 ರನ್ ಗಳನ್ನು ಮೀರಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.
ನಿಯಮಗಳ ಪ್ರಕಾರ, ರಣಜಿ ಟ್ರೋಫಿಯಲ್ಲಿ ಪಂದ್ಯ ರದ್ದಾದರೆ, ಮೊದಲ ಇನ್ನಿಂಗ್ಸ್ ಆಧರಿಸಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಈ ನಿಯಮದನ್ವಯ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು.
ಪಂದ್ಯ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಜಮ್ಮುಕಾಶ್ಮೀರದ ಆಟಗಾರರು ಕುಣಿದು ಕುಪ್ಪಳಿಸಿದರು. ಜಮ್ಮುಕಾಶ್ಮೀರ ಸಿಎಂ ಸಿಎಂ ಓಮರ್ ಅಬ್ದುಲ್ಲಾ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು.
Key words: Jammu and Kashmir, Ranji Trophy, first time,defeating, Karnataka







