ಗಿಳಿಶಾಸ್ತ್ರದ ಮೊರೆ ಹೋದ IT ಇಲಾಖೆ ಅಧಿಕಾರಿಗೆ 35 ಲಕ್ಷ ರೂ. ಪಂಗನಾಮ

ಬೆಂಗಳೂರು,ಮಾರ್ಚ್,10,2026 (www.justkannada.in):  ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಇಲಾಖೆ ಅಧಿಕಾರಿಗೆ ಗಿಳಿಶಾಸ್ತ್ರ ಹೇಳುವವ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ವಂಚನೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಗಿಳಿಶಾಸ್ತ್ರ ಹೇಳುವವನನ್ನು ನಂಬಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಈಗ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶೇಖರ್ ಎಂಬಾತನೇ ವಂಚನೆ ಮಾಡಿರುವವನು.

ಕೆಲವು ವರ್ಷಗಳಿಂದ ಬೆಂಗಳೂರಿನ ಐಟಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಅಧಿಕಾರಿಯನ್ನು ನಂಬಿಸಿದ್ದ.

ನಿಮ್ಮ ಜೀವನ ಸುಧಾರಣೆ ಆಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ ಗಿಳಿಶಾಸ್ತ್ರದ ಶೇಖರ್, ಅದಕ್ಕಾಗಿ ಆರಂಭದಲ್ಲಿ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ಮಾಡಿಸಿದ್ದ. ನಂತರವೂ ಆ ಅಧಿಕಾರಿಗೆ ಪದೇ ಪದೇ ಕರೆ ಮಾಡಿ ವಿವಿಧ ಪೂಜೆಗಳ ಬಗ್ಗೆ ಹೇಳುತ್ತಿದ್ದ. ಇದೇ ವೇಳೆ ವರ್ಗಾವಣೆಯ ವಿಚಾರವಾಗಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತಂದುಕೊಡಿ ಎಂದು ಶೇಖರ್ ತಿಳಿಸಿದ್ದ. ಈತನ  ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದರು.

ಒಂದು ದಿನದಲ್ಲೇ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ನಂತರ ಪೂಜೆ ಇನ್ನೂ ಮುಗಿದಿಲ್ಲ ಎಂದು ಹೇಳಿ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ಸತಾಯಿಸಿದ್ದ. ಬಳಿಕ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಅಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಇರಲಿಲ್ಲ. ಗಿಳಿಶಾಸ್ತ್ರ ಹೇಳುವ ವ್ಯಕ್ತಿ ಇಲ್ಲದಿರುವುದು ಗೊತ್ತಾಗಿದ್ದು  ತಾನು ಮೋಸ ಹೋಗಿರುವ ಬಗ್ಗೆ ಅರಿವಿಗೆ ಬಂದ ಬೆನ್ನಲ್ಲೆ  ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಿಳಿಶಾಸ್ತ್ರ ಹೇಳುವ ಶೇಖರ್‌ ಗಾಗಿ ಹುಡುಕಾಟ ಆರಂಭಿಸಿದ್ದಾರೆ.

Key words: IT department, officer, parrot, fraud, Rs 35 lakh